ಸಾರಾಂಶ
ರಾಣಿಬೆನ್ನೂರು ನಗರದ ಹಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಘಟಕ ಹಾಗೂ ಪ್ರಯೋಗಾಲಯ ಕಟ್ಟಡಕ್ಕೆ ಶಾಸಕ ಪ್ರಕಾಶ ಕೋಳಿವಾಡ ಭೂಮಿಪೂಜೆ ನೆರವೇರಿಸಿದರು.
ರಾಣಿಬೆನ್ನೂರು: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಹಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಘಟಕ ಹಾಗೂ ಪ್ರಯೋಗಾಲಯ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರೋಗಿಗಳ ಅನಾರೋಗ್ಯದ ವಿಚಾರವಾಗಿ ರಕ್ತ ಪರೀಕ್ಷೆ ಮತ್ತು ಹೃದಯಘಾತ ಕುರಿತು ಹೆಚ್ಚಿನ ವರದಿಗಾಗಿ ಅಥವಾ ಪರೀಕ್ಷೆಯ ಪ್ರಯೋಗಾಲಯಕ್ಕೆ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕಾಗಿತ್ತು. ಇದರಿಂದ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು, ಇದೀಗ ನೂತನ ಆಧುನಿಕ ತಂತ್ರಜ್ಞಾನದ ಪ್ರಯೋಗಾಲಯದಿಂದ ತುಂಬಾ ಅನುಕೂಲವಾಗಲಿದೆ. ನಗರದ ಸರ್ಕಾರಿ ಆಸ್ಪತ್ರೆಯು ಸದ್ಯ 100 ಬೆಡ್ ಸೌಲಭ್ಯವಿದ್ದು, ಶೀಘ್ರದಲ್ಲಿಯೇ ಅದನ್ನು 250ಕ್ಕೆ ಹೆಚ್ಚಿಸಲಾಗುವುದು. ಈ ಬಗ್ಗೆ ಆರೋಗ್ಯ ಮಂತ್ರಿಗಳೊಂದಿಗೆ ಮಾತನಾಡಿದ್ದು, ಅವರೂ ಒಪ್ಪಿಕೊಂಡಿದ್ದಾರೆ. 6 ತಿಂಗಳೊಳಗೆ ಆರೋಗ್ಯ ಸುಧಾರಣೆಗಾಗಿ ಒತ್ತು ನೀಡಲಾಗುವುದು ಎಂದರು.ಆಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರು ಮಾತನಾಡಿ, ರಕ್ತ ಪರೀಕ್ಷೆ, ಇನ್‌ಫೆಕ್ಷನ್ ಹಾಗೂ ಹೃದಯಾಘಾತ ಕುರಿತು ಹೆಚ್ಚಿನ ಪ್ರಯೋಗಕ್ಕಾಗಿ ಹಾವೇರಿಗೆ ಕಳುಹಿಸಲಾಗುತ್ತಿತ್ತು. ಇದೀಗ ತಾಲೂಕಿನಲ್ಲಿ ಈ ಪ್ರಯೋಗಾಲಯ ನಿರ್ಮಾಣವಾಗುತ್ತಿರುವುದು ಈ ಭಾಗದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಾಜಿ ಸದಸ್ಯ ಬಸವರಾಜ ಹುಚಗೊಂಡರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಸವರಡ್ಡಿ ಕೋಳಿವಾಡ, ರಮೇಶ ಭಜಂತ್ರಿ, ಗೀತಾ ಕವಳಾಸ್ತ್ರಮಠ, ರಮೇಶ ಗೋಣಗೇರಿ, ನಿಶಾದ್ ಫಿರಖಾನವರ, ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ ಮತ್ತಿತರರಿದ್ದರು.