ಬೆಂಬಲ ಬೆಲೆಯಡಿ ಕ್ವಿಂಟಲ್‌ಗೆ ₹7263ರಂತೆ ಶೇಂಗಾ ಖರೀದಿ

| Published : Oct 09 2025, 02:01 AM IST

ಸಾರಾಂಶ

ಸರ್ಕಾರದ ಮಾನದಂಡಗಳನ್ವಯ ಎಫ್ಎಕ್ಯು ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಶೇಂಗಾ ಖರೀದಿ ಪ್ರಕ್ರಿಯೆಯಲ್ಲಿ ಎಫ್ಎಕ್ಯು ಗುಣಮಟ್ಟ ಪರಿಶೀಲನೆಗಾಗಿ ಲಭ್ಯವಿರುವ ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಳ್ಳುವುದು.

ಗದಗ: 2025- 26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್ಎಕ್ಯು ಗುಣಮಟ್ಟದ ಶೇಂಗಾ ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಇತ್ತೀಚೆಗೆ 2025- 26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಶೇಂಗಾ ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್ ಎಫ್ಎಕ್ಯು ಗುಣಮಟ್ಟದ ಶೇಂಗಾ ಖರೀದಿಸಲು ಹಾಗೂ ಶೇಂಗಾ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಶೇಂಗಾ ಉತ್ಪನ್ನವನ್ನು ಖರೀದಿಸಿದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.ಸರ್ಕಾರದ ಮಾನದಂಡಗಳನ್ವಯ ಎಫ್ಎಕ್ಯು ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಶೇಂಗಾ ಖರೀದಿ ಪ್ರಕ್ರಿಯೆಯಲ್ಲಿ ಎಫ್ಎಕ್ಯು ಗುಣಮಟ್ಟ ಪರಿಶೀಲನೆಗಾಗಿ ಲಭ್ಯವಿರುವ ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಳ್ಳುವುದು. ತರಬೇತಿ ಅವಶ್ಯವಿದ್ದಲ್ಲಿ ಅಂತಹ ಸಿಬ್ಬಂದಿಗೆ ಎಫ್ಎಕ್ಯು ಗ್ರೇಡಿಂಗ್ ತರಬೇತಿ ನೀಡಲು ಸಂಬಂಧಪಟ್ಟ ಖರೀದಿ ಸಂಸ್ಥೆಗಳು ಕ್ರಮ ವಹಿಸಬೇಕು. ಸರ್ಕಾರ ಬೆಂಬಲ ಬೆಲೆಯಲ್ಲಿ ಶೇಂಗಾ ಹುಟ್ಟುವಳಿಯ ಖರೀದಿ ಕುರಿತು ರೈತರು ಸದುಪಯೋಗ ಪಡೆದುಕೊಳ್ಳಲು ರೈತರಿಗೆ ತಿಳಿವಳಿಕೆ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು ಯೋಜನೆಯ ಲಾಭ ಪಡೆಯುಲು ಅನುಕೂಲವಾಗುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಬಂಡಿ ಮಾತನಾಡಿ, ಎಫ್ಎಕ್ಯು ಗುಣಮಟ್ಟದ ಶೇಂಗಾ ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ₹7263ರಂತೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಸರ್ಕಾರದ ಆದೇಶದನುಸಾರ ನ್ಯಾಫೆಡ್ ಸಂಸ್ಥೆ ಹಾಗೂ ಎನ್‌ಸಿಸಿಎಫ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ(ಕೆಒಎಫ್) ಬೆಂಗಳೂರು ಇವರನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಿದೆ ಎಂದರು.

ಈ ವೇಳೆ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಶೇಂಗಾ ಖರೀದಿ ಕೇಂದ್ರಗಳ ಸ್ಥಳ

ಗದಗ ತಾಲೂಕಿನ ಬಳಗಾನೂರ, ಹೊಂಬಳ, ಮುಳಗುಂದ, ಶಿರಹಟ್ಟಿ ತಾಲೂಕಿನ ರಣತೂರ, ಶಿಗ್ಲಿ, ರೋಣ ತಾಲೂಕಿನ ಅಬ್ಬಿಗೇರಿ, ಗಜೇಂದ್ರಗಡ, ನರಗುಂದ ತಾಲೂಕಿನ ಕಣಕಿಕೊಪ್ಪ, ಮುಂಡರಗಿ ತಾಲೂಕಿನ ಬರದೂರು, ಕಲಕೇರಿ.