ಬ್ಯಾರೇಜ್ ನಿರ್ಮಾಣದಿಂದ ಅಂತರ್ಜಲ ವೃದ್ಧಿ

| Published : Feb 06 2025, 12:16 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಹಳ್ಳದ ದಡದಲ್ಲಿರುವ ರೈತರ ಭೂಮಿಗೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಹಳ್ಳದ ದಡದಲ್ಲಿರುವ ರೈತರ ಭೂಮಿಗೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಸುಮಾರು ₹2 ಕೋಟಿ ವೆಚ್ಚದ ನಾಲಾಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಹಾಗೂ ₹45 ಲಕ್ಷ ವೆಚ್ಚದ ತಾಂಬಾ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಹಳ್ಳಕ್ಕೆ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಹಳ್ಳಗಳಲ್ಲಿ ಹರಿಯುತ್ತಿರುವ ನೀರು ನಿಂತು ಬೇಸಿಗೆ ಸಮಯದಲ್ಲಿ ಅಂತರ್ಜಲಮಟ್ಟ ಸಹ ಹೆಚ್ಚುತ್ತದೆ. ಅಲ್ಲದೆ ರಸ್ತೆ ಸಂಪರ್ಕ ಸಹ ಸುರಕ್ಷಿತವಾಗಿರುತ್ತದೆ ಎಂಬ ಉದ್ದೇಶದಿಂದ ಕ್ಷೇತ್ರದ ಹಲವು ಭಾಗಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೈತರ ಬದುಕು ಹಸನಾಗಲು ಸಣ್ಣ ಸಣ್ಣ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಾಂಬಾ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆ ನಿರ್ವಹಣೆ ಕಾಮಗಾರಿಗೆ ಸುಮಾರು ₹ 45 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ ಮಾತನಾಡಿ, ಈ ಭಾಗದಲ್ಲಿ ಶಾಸಕರಾದ ರಾಜುಗೌಡ ಪಾಟೀಲ ಅವರ ಸತತ ಪ್ರಯತ್ನದಿಂದ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೇಸಿಗೆ ಸಮಯದಲ್ಲಿ ರೈತರಿಗೆ ಬಾವಿ ಹಾಗೂ ಬೋರ್‌ವೆಲ್‌ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ರಸ್ತೆ ಸಂಪರ್ಕದಿಂದ ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಸಂಪಗಾವಿ ಪ್ರಭುದೇವರ ಬೆಟ್ಟ ಮಹಾರಾಜರು ವಹಿಸಿದ್ದರು. ಈ ವೇಳೆ ಗ್ರಾಪಂ ಅಧ್ಯಕ್ಷೆ ರತ್ನಾಬಾಯಿ ಮಾದರ, ಮತಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ವೀರೇಶ ಕುದರಿ, ಮುಖಂಡರಾದ ಗುರುರಾಜ ಆಕಳವಾಡಿ, ಸಂಗನಗೌಡ ಬಿರಾದಾರ, ಶಂಕ್ರೆಪ್ಪ ದುದ್ದಗಿ, ಬಸವಂತ್ರಾಯ ಈಶ್ವರಪ್ಪಗೋಳ, ರಮೇಶ ಈಶ್ವರಪ್ಪಗೋಳ, ದಾದಾಗೌಡ ಬಿರಾದಾರ, ಸದಾಶಿವ ಗುಣದಾಳ, ಗುರುಪಾದ ದುದ್ದಗಿ, ಸದಾಶಿವ ದುದ್ದಗಿ, ಶಿವನಗೌಡ ಬಿರಾದಾರ, ಸಿಂದಗಿ ಜಿಪಂ ಎಇಇ ಜಿ.ವೈ.ಮುರಾಳ, ಸಣ್ಣ ನೀರಾವರಿ ಇಲಾಖೆ ಎಇಇ ವಿಲಾಸ ರಾಠೋಡ, ಬಾಂದಾರ ಕಾಮಗಾರಿ ಗುತ್ತಿಗೆದಾರ ವಿ.ಎಸ್.ನಾಡಗೌಡ, ಗಂಗನಳ್ಳಿ ತಾಂಬಾ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರ ಗದ್ದೆಪ್ಪ ಜಾಲಹಳ್ಳಿ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಜಗದೀಶ ತಳವಾರ ನಿರೂಪಿಸಿ, ಸ್ವಾಗತಿಸಿದರು.