ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ನಗರದ ದೀವಳಗುಡ್ಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ, ಭಾರತಕ್ಕೆ ಶೇ.33ರಷ್ಟು ಅರಣ್ಯ ಅಗತ್ಯ. ಆದರೆ ಶೇ.21.07ರಷ್ಟು ಮಾತ್ರ ಅರಣ್ಯ ಹೊಂದಿದ್ದೇವೆ. ಇದರಿಂದ ವಾತಾವರಣ ಪ್ರತಿಕೂಲವಾಗುತ್ತಿದೆ. ಬೇಸಿಗೆ, ಮಳೆಗಾಲ, ಚಳಿಗಾಲಗಳಲ್ಲಿ ಏರುಪೇರು ನಡೆಯುತ್ತಿದೆ. ಸಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಅಧಿಕ ಉಷ್ಣಾಂಶ ಅನುಭವಿಸುತ್ತಿದ್ದೇವೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡಿದ್ದೇವೆ. ದಾಖಲೆಯ ರೂಪದಲ್ಲಿ ದೆಹಲಿಯಲ್ಲಿ 53 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. ಇದು ಜನರ ಸಾವಿಗೆ ಕಾರಣವಾಗಿದೆ. ಆದ್ದರಿಂದ ಕಾಡು ಬೆಳೆಸಬೇಕಾದ್ದು ಅತ್ಯಗತ್ಯ ಎಂದು ಕರೆ ನೀಡಿದರು.ತಾಲೂಕಿನಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯೂ ಪರಿಸರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮನೆಗೊಂದು ಗಿಡ ಬೆಳೆಸಿದರೆ ಹಸರೀಕರಣ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಸಂರಕ್ಷಣೆ ಹೊಣೆ ಹೊರಬೇಕು ಎಂದು ತಿಳಿಸಿದರು.
ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಪರಿಸರ ನಾಶದಿಂದಾಗಿ ಬರಗಾಲ ಪರಿಸ್ಥಿತಿ ಎದುರಿಸಿದ್ದೇವೆ. ಪ್ರತಿ ವರ್ಷ ಅತಿ ಹೆಚ್ಚು ಸಸಿಗಳನ್ನು ರಸ್ತೆ ಬದಿ, ಮನೆ ಮುಂದೆ ನೆಟ್ಟು ಸಂರಕ್ಷಿಸಬೇಕು ಎಂದರು.ಅರಣ್ಯಾಧಿಕಾರಿ ಶರಣಪ್ಪ, ಕೃಷಿ ಸಹಾಯಕ ನಿರ್ದೇಶಕ ಭೀಮರಾಯ ಹವಾಲ್ದಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಪರಮೇಶ್ವರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಸಂತೋಷ, ಕರ್ನಾಟಕ ರಕ್ಷಣಾ ಸೇನೆ ಶರಣು ಬೈರಿಮರಡಿ, ತಾಲೂಕಾಧ್ಯಕ್ಷ ಮಲ್ಲು ನಾಯಕ ಕಬಾಡಿಗೇರ, ತಾಲೂಕು ಕಾರ್ಯಧ್ಯಕ್ಷ ಶಿವರಾಜ ವಗ್ಗಾರ ಸೇರಿದಂತೆ ಇತರರಿದ್ದರು.