ಕೃಷಿಯನ್ನು ಉದ್ಯಮವಾಗಿ ಬೆಳೆಸಿ: ಪ್ರಶಾಂತ ಬಡ್ಡಿ

| Published : Jul 04 2025, 11:54 PM IST

ಸಾರಾಂಶ

ಶುಕ್ರವಾರ ಹಳಿಯಾಳ ಪಟ್ಟಣದ ಕೆನರಾ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ತಾಲೂಕಿನ ರೈತರಿಗೆ ಕೃಷಿ ಜಾಗೃತಿ ಕಾರ್ಯಾಗಾರ ನಡೆಯಿತು. ವಿವಿಧ ಕೃಷಿ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಹಳಿಯಾಳ: ರೈತರು ಸಕಾರಾತ್ಮಕವಾಗಿ ಚಿಂತನೆ ಮಾಡಿ, ತಮ್ಮ ಸಾಂಪ್ರದಾಯಿಕ ಬೇಸಾಯ ಪದ್ಧತಿಯಿಂದ ಹೊರ ಬಂದು ದೂರದೃಷ್ಟಿ ಕೋನದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ ದುಪ್ಪಟ್ಟು ಲಾಭ ಪಡೆಯಲು ಸಾಧ್ಯ, ರೈತರು ಕೃಷಿಯನ್ನು ಬೇಸಾಯದ ಬದಲು ಉದ್ಯಮವಾಗಿ ಬೆಳೆಸಬೇಕು ಎಂದು ಹಳಿಯಾಳದ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ನಿರ್ದೇಶಕ ಪ್ರಶಾಂತ ಬಡ್ಡಿ ಹೇಳಿದರು.

ಶುಕ್ರವಾರ ಪಟ್ಟಣದ ಕೆನರಾ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ತಾಲೂಕಿನ ರೈತರಿಗೆ ಆಯೋಜಿಸಿದ ಕೃಷಿ ಜಾಗೃತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿಯ ಅಭಿವೃದ್ಧಿಗಾಗಿ ಇಂದು ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅದರ ಪ್ರಯೋಜನವನ್ನು ತಾಲೂಕಿನ ರೈತರು ಪಡೆಯಬೇಕು ಎಂದರು.

ಭತ್ತದ ವಿವಿಧ ತಳಿಗಳ ಕೃಷಿಯ ಬಗ್ಗೆ ಉಪನ್ಯಾಸ ತರಬೇತಿ ನೀಡಲು ಆಗಮಿಸಿದ ಕುಮಟಾದ ಪ್ರಗತಿ ಪರ ರೈತ ನಾಗರಾಜ ಮೋಹನ ನಾಯ್ಕ ಮಾತನಾಡಿ, ಜಾಗತಿಕವಾಗಿ ಭತ್ತದ ಬೇಸಾಯಕ್ಕೆ ಬೇಡಿಕೆಯಿದೆ, ಆದರೆ ಇಂದು ರೈತರು ಲಾಭ ಅರಸಿಕೊಂಡು ಭತ್ತದ ಬದಲು ವಾಣಿಜ್ಯ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಕೃಷಿ ಭಾರತದ ಬೆನ್ನೆಲೆಬು ಎಂಬ ವಿಷಯ ಬಾಲ್ಯದಿಂದಲೇ ತಿಳಿದವರು ನಾವು ಕೃಷಿಯಿಂದ ವಿಮುಖರಾಗುತ್ತಿರುವುದರ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ತಾಳೆಯ ಕೃಷಿಯ ಬಗ್ಗೆ ತರಬೇತಿ ನೀಡಲು ಆಗಮಿಸಿದ ಮುಖ್ಯ ಸಂಪನ್ಮೂಲ ವ್ಯಕ್ತಿ ಬಾಗಲಕೋಟೆಯ ಶ್ರೀಶೈಲ್ ಕುಬಕಡ್ಡಿ ಮಾತನಾಡಿ, ತಾಳೆ ಕೃಷಿಯು ರೈತರಿಗೆ ಲಾಭದಾಯಕವಾದ ಬೆಳೆಯಾಗಿದೆ, ತಾಳೆಯನ್ನು ಅಡುಗೆ ಮನೆಯಿಂದ ಹಿಡಿದು ಸೌಂದರ್ಯ ವರ್ಧಕ, ಮಾರ್ಜಕ, ಜೈವಿಕ ಇಂಧನಕ್ಕಾಗಿ ಬಳಸಲಾಗುತ್ತಿದೆ. ಇಂದು ದೇಶದಲ್ಲಿ ನಾವು ಬಳಸುವ ತಾಳೆ ಎಣ್ಣೆ ವಿದೇಶದಿಂದ ಆಮದು ಮಾಡಲಾಗುತ್ತಿರುವುದರಿಂದ ಕೊಟ್ಯಂತರ ಆರ್ಥಿಕ ಹೊರೆಯು ದೇಶದ ಮೇಲೆ ಬಿದ್ದಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದಲ್ಲಿ ತಾಳೆ ಉತ್ಪಾದನೆಗೆ ಒತ್ತು ನೀಡಿ ತಾಳೆ ಕೃಷಿ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯ ಯೋಜನೆ ಜಾರಿಗೊಳಿಸಿದೆ, ಅದಕ್ಕಾಗಿ ರಾಷ್ಟ್ರೀಯ ತಾಳೆ ಎಣ್ಣೆ ಮಿಷನ ಜಾರಿಗೆ ತಂದಿದೆ ಎಂದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ಆರ್. ಹೆರಿಯಾಲ್ ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯ ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಆರ್‌ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಅವರು ಆರ್‌ಸೆಟಿ ಸಂಸ್ಥೆಯಿಂದ ಕೃಷಿ ಕ್ಷೇತ್ರಕ್ಕಾಗಿ ಕೈಗೊಂಡಿರುವ ಯೋಜನೆಗಳ ಮಾಹಿತಿ ನೀಡಿದರು.

ಸಂಸ್ಥೆಯ ಕ್ಷೇತ್ರ ನಿರೀಕ್ಷಕ ವಿಷ್ಣು ಮಡಿವಾಳ ಹಾಗೂ ಉಳವಯ್ಯಾ ಬಿ. ಕಾರ್ಯಕ್ರಮ ನಿರೂಪಿಸಿದರು.