ಆರೋಗ್ಯಕರ ಜೀವನಕ್ಕಾಗಿ ಮರಗಿಡ ಬೆಳೆಸಿ ಪೋಷಿಸಿ: ನ್ಯಾಯಾಧೀಶ ಎಸ್.ಸಿ.ನಳಿನ

| Published : Sep 29 2024, 01:30 AM IST

ಸಾರಾಂಶ

ಕಾಡು ನಾಶ, ಸವಕಳಿ, ಪ್ರವಾಹ, ಕುಸಿತ ದಿಂದಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಪರಿಸರ ನಾಶವೇ ಕಾರಣ. ಹೀಗಾಗಿ ಸಮುದಾಯ ಮಕ್ಕಳಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಕಾಡುಗಳನ್ನು ರಕ್ಷಣೆಮಾಡುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಜಾಗೃತಗೊಳಿಸುವ ಕಾರ್ಯ ಅತ್ಯಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರು ಮರ-ಗಿಡಗಳನ್ನು ಬೆಳೆಸಿ ಪೋಷಣೆ ಮಾಡಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಒಂದನೇ ಅಪರ ಸಿವಿಲ್ ನ್ಯಾಯಾಧೀಶ ಎಸ್.ಸಿ.ನಳಿನ ಶನಿವಾರ ಹೇಳಿದರು.

ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಲಯ ಮತ್ತು ಸಾಮಾಜಿಕಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತೀಕರಣ ಮತ್ತು ಉದಾರೀಕರಣ ನೀತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಮರಗಳ ನಿರಂತರ ಹನನವಾಗುತ್ತಿದೆ. ಇದರಿಂದ ಮನುಷ್ಯನ ಆರೋಗ್ಯ ಮಾತ್ರವಲ್ಲದೆ ಪ್ರಕೃತಿ ಪ್ರಾಣಿ ಪಕ್ಷಿಗಳ ಆರೋಗ್ಯಕ್ಕೆ ಕಂಟಕ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಡು ನಾಶ, ಸವಕಳಿ, ಪ್ರವಾಹ, ಕುಸಿತ ದಿಂದಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಪರಿಸರ ನಾಶವೇ ಕಾರಣ. ಹೀಗಾಗಿ ಸಮುದಾಯ ಮಕ್ಕಳಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಕಾಡುಗಳನ್ನು ರಕ್ಷಣೆಮಾಡುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಜಾಗೃತಗೊಳಿಸುವ ಕಾರ್ಯ ಅತ್ಯಗತ್ಯವಾಗಿದೆ ಎಂದರು.

ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಪಿ.ಕಿರಣ್ ಮಾತನಾಡಿ, ಕೇವಲ ಶಾಲಾ ಕಾಲೇಜುಗಳ ಮುಂದೆ ಗಿಡ ನೆಟ್ಟು ಕಾರ್ಯಕ್ರಮ ನಡೆಸಿದರೆ ಪರಿಸರ ರಕ್ಷಣೆ ಉದ್ದೇಶ ಈಡೇರುವುದಿಲ್ಲ. ಅದಕ್ಕೆ ಪ್ರತಿಯೊಬ್ಬರೂ ನೀರೆರದು ಪೋಷಣೆ ಮಾಡಿದಾಗ ಮಾತ್ರ ಪರಿಸರ ರಕ್ಷಣೆ ಉದ್ದೇಶ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಗಿಡವನ್ನು ದತ್ತು ತೆಗೆದುಕೊಂಡು ಪೋಷಿಸಿ ಪಾಲನೆ ಮಾಡುವ ವಾಗ್ದಾನ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ. ಜೆ.ಸುಮಂತ್, ವಲಯ ಅರಣ್ಯಾಧಿಕಾರಿಗಳಾದ ಗವಿಯಪ್ಪ, ಮುರಳಿಧರ ನಾಯಕ್. ಉಪ ವಲಯ ಅರಣ್ಯ ಅಧಿಕಾರಿ ಸುದರ್ಶನ್, ಎಚ್ ಕೆ ವಿ ಕಾಲೇಜಿನ ಕಾರ್ಯದರ್ಶಿ ಅಪೂರ್ವ ಚಂದ್ರ, ಪ್ರಾಂಶುಪಾಲ ಶಂಕರೇಗೌಡ, ಪ್ರಾಧ್ಯಾಪಕ ಪ್ರಕಾಶ್, ಎನ್ ಎಸ್ ಎಸ್ ಅಧಿಕಾರಿ ಪ್ರದೀಪ್ ಮತ್ತಿತರರು ಇದ್ದರು.