ವಾಣಿಜ್ಯಕ್ಕಿಂತ ಆಹಾರ ಬೆಳೆಗಳ ಬೆಳೆಯಿರಿ

| Published : Nov 13 2024, 12:07 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ರೈತರು ಕಡಿಮೆ ಸಮಯದಲ್ಲಿ ಶ್ರೀಮಂತನಾಗುವ ಭರದಲ್ಲಿ ವಾಣಿಜ್ಯ ಬೆಳೆಗಳನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದ ಮಾನವರ ಜೀವನಕ್ಕೆ ಬೇಕಾದ ಆಹಾರ ಪದಾರ್ಥಗಳ ಬೆಳೆಗಳ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುವುದು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

- ಭತ್ತ ನೇರ ಬಿತ್ತನೆ ತರಬೇತಿ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಶ್ರೀ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪ್ರಸ್ತುತ ದಿನಗಳಲ್ಲಿ ರೈತರು ಕಡಿಮೆ ಸಮಯದಲ್ಲಿ ಶ್ರೀಮಂತನಾಗುವ ಭರದಲ್ಲಿ ವಾಣಿಜ್ಯ ಬೆಳೆಗಳನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದ ಮಾನವರ ಜೀವನಕ್ಕೆ ಬೇಕಾದ ಆಹಾರ ಪದಾರ್ಥಗಳ ಬೆಳೆಗಳ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುವುದು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಹೊನ್ನೇಮರದಹಳ್ಳಿ ಗ್ರಾಮದಲ್ಲಿ ಕಿಸಾನ್ ಕ್ರಾಫ್ಟ್ ಮತ್ತು ನೆಕ್ಸ್ಟ್‌ ಜೆನ್ ಲೈಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭತ್ತ ನಾಟಿ ಮಾಡದೇ ಕೃಷಿ ಭೂಮಿಯಲ್ಲಿ ನೇರವಾಗಿ ಬಿತ್ತನೆ ತಂತ್ರಜ್ಞಾನದ ಬಗ್ಗೆ ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ ₹80 ಸಾವಿರ ದಾಟಿದೆ. 1 ಕೆ.ಜಿ. ಜೋಳದ ಬೆಲೆ ₹40 ಇದೆ. ಇದು ಮನುಷ್ಯನಿಗೆ ಹಸಿವಾದಾಗ ತಿನ್ನುವ ಅನ್ನಕ್ಕೆ ಬೆಲೆಯೇ ಇಲ್ಲ ಎಂಬುದರ ಸಂಕೇತದಂತಿದೆ. ನಮ್ಮನ್ನಾಳುವ ಸರ್ಕಾರಗಳು ರೈತರು ಬೆಳೆದ ಬೆಲೆಗೆ ನ್ಯಾಯಸಮ್ಮತ ಬೆಲೆ ನೀಡಲು ಮುಂದಾಗಬೇಕು ಎಂದರು.

ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಕೂಲಿ ಆಳುಗಳಿಲ್ಲದೇ, ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸದೇ, ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಪ್ರಯೋಗ ತಾಲೂಕಿನ ಯುವಕ ಮಾಡಿರುವುದು ಸಂತಸದ ವಿಷಯವಾಗಿದೆ ಎಂದರು.

ನೆಕ್ಸ್ಟ್ ಜೆನ್ ಲೈಫ್ ಸಂಸ್ಥೆಯ ಬಿ.ಆರ್. ರಘು ಮಾತನಾಡಿ, ಭಾರತದ ಕೃಷಿ ಪದ್ಧತಿಯು ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಾದರೂ ರೈತರಿಗೆ ಯಾವುದೇ ನಷ್ಟ ಮಾಡದೇ ಅಧಿಕ ಇಳುವರಿ ನೀಡುವ ಭತ್ತವನ್ನು ನನ್ನ ಜಮೀನಿನಲ್ಲಿ ಪ್ರಾಯೋಗಿಕವಾಗಿ ಅರ್ಧ ಎಕರೆಯಲ್ಲಿ ಬೆಳೆದಿದ್ದೇನೆ. ಉತ್ತಮವಾಗಿ ಬೆಳೆದು ನಿಂತಿರುವ ಬಗ್ಗೆ ಶಿಬಿರದಲ್ಲಿದ್ದ ರೈತರಿಗೆ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದೇನೆ ಎಂದು ತಮ್ಮ ಸಾಧನೆಯ ಅನುಭವವನ್ನು ವಿವರಿಸಿದರು.

ಕಿಸಾನ್ ಕ್ರಾಫ್ಟ್ ಸಂಸ್ಥೆ ಮುಖ್ಯಸ್ಥ ಅಮಿತ್ ಶರ್ಮಾ ಮಾತನಾಡಿದರು. ರೈತ ಮುಖಂಡರಾದ ಮುರುಗೇಂದ್ರಪ್ಪ, ಸೌಜನ್ಯ, ಶ್ರೀನಾಥ್, ಕುಬೇಂದ್ರ ಸ್ವಾಮಿ, ಸತೀಶ್, ಅರುಣ್, ಸಿದ್ದರಾಮೇಶ್, ರೈತರು ಭಾಗವಹಿಸಿದ್ದರು.

- - - -12ಕೆಸಿಎನ್‌ಜಿ1:

ಪ್ರಾತ್ಯಕ್ಷಿಕೆಯಲ್ಲಿ ಪಾಂಡೋಮಟ್ಟಿ ಶ್ರೀಗಳು, ಮತ್ತಿತರ ಗಣ್ಯರು ಪಾಲ್ಗೊಂಡರು.