ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ರೇಷ್ಮೆ ಇಲಾಖೆಯಿಂದ ಸಿಗುವ ಸರ್ಕಾರದ ಸೌಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಗುಣಮಟ್ಟ ರೇಷ್ಮೆ ಗೂಡನ್ನು ಬೆಳೆದು ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಸಲಹೆ ನೀಡಿದರು.ದೇವಿರಳ್ಳಿಯಲ್ಲಿ ಹಲಗೂರು ರೇಷ್ಮೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದ್ವಿತಳಿ ರೇಷ್ಮೆ ಬೆಳೆಗಾರರ ಕಾರ್ಯಾಗಾರ ಹಾಗೂ ಬೆಳೆ ಕ್ಷೇತ್ರೋತ್ಸವ ಮತ್ತು ರೇಷ್ಮೆಬೆಳೆ ತರಬೇತಿಯಲ್ಲಿ ಮಾತನಾಡಿದರು.
ಮೊದಲು ನೀವು ನಿಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದನ್ನು ನಮ್ಮ ಇಲಾಖೆಯಿಂದ ಉಚಿತವಾಗಿ ಮಾಡಲಾಗುತ್ತಿದೆ. ನರೇಗಾ ಯೋಜನೆಯಡಿ ನಿಮ್ಮ ಪಂಚಾಯ್ತಿಯಲ್ಲಿ ನೋಂದಣಿ ಮಾಡಿ ಜಾಬ್ ಕಾರ್ಡ್ ಮೂಲಕ ಬೇರೆ ಬೇರೆ ಸರ್ವೆ ನಂಬರ್ ಜಮೀನಿನಲ್ಲಿ ನರ್ಸರಿ ,ಕಡ್ಡಿ ನಾಟಿ, ಮರಗಡ್ಡಿ ನಾಟಿ ಮಾಡಲು ಅವಕಾಶವಿದೆ ಎಂದರು.ಒಬ್ಬ ಫಲಾನುಭವಿಗೆ 5 ಲಕ್ಷ ರು ವರೆಗೆ ಈ ಯೋಜನೆಯಲ್ಲಿ ಲಭ್ಯವಿದೆ. ಸೂಕ್ತ ದಾಖಲಾತಿಗಳನ್ನು ಪಂಚಾಯ್ತಿಗೆ ನೀಡಿ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ಮಾಡಿದ್ದೇವೆ. ನಿಮ್ಮ ಬೆನ್ನೆಲುಬಾಗಿ ನಿಂತು ಏನೆಲ್ಲಾ ಸಲಕರಣೆಗಳು ಬೇಕು ಅದನ್ನು ಒದಗಿಸಿಕೊಡುತ್ತೇವೆ ಎಂದು ತಿಳಿಸಿದರು.
ರೈತರು ಒಳ್ಳೆಯ ಗುಣಮಟ್ಟದ ಗೂಡನ್ನು ಬೆಳೆದು ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.ಹಲಗೂರು ರೇಷ್ಮೆ ಇಲಾಖೆ ಅಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ರೇಷ್ಮೆ ಇಲಾಖೆಯಲ್ಲಿರುವ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಂಡು ರೇಷ್ಮೆ ಬೆಳೆಯುವ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.
ತಾಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾತನಾಡಿ, ರೈತರು ನರೇಗಾ ಯೋಜನೆ ಅಡಿ ಹನಿ ನೀರಾವರಿ ಪದ್ಧತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಶಿವಕುಮಾರ್ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿ ರೇಷ್ಮೆ ಬೆಳೆಯನ್ನು ಹೇಗೆ ನಿರ್ವಹಣೆ ಮಾಡಬೇಕು. ಈ ಭಾಗದಲ್ಲಿ ರೇಷ್ಮೆಗೆ ತಗಲುವ ಬೇರು ಕೊಳೆ ರೋಗ ಅಧಿಕವಾಗಿ ಕಂಡು ಬಂದಿದ್ದು, ಅವುಗಳಿಗೆ ಹೇಗೆ ಔಷಧಿ ಸಿಂಪಡಣೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಹಲಗೂರು ರೇಷ್ಮೆ ಉಪನಿರ್ದೇಶಕ ಸುರೇಶ್, ಕೆ.ಆರ್.ಪೇಟೆ ರೇಷ್ಮೆ ತರಬೇತಿ ಶಾಲೆ ಸಹಾಯಕ ನಿರ್ದೇಶಕ ಸುರೇಶ್, ಸತ್ಯನಾರಾಯಣ ಭಟ್, ಇನ್ಸ್ ಪೆಕ್ಟರ್ ನವೀನ್ ಕುಮಾರ್ ಉಪಸ್ಥಿತರಿದ್ದರು.