ಅಡಕೆ ಜತೆ ಉಪಬೆಳೆ ಬೆಳೆಯಿರಿ: ಭೀಮಣ್ಣ ನಾಯ್ಕ

| Published : Jun 25 2024, 12:33 AM IST

ಸಾರಾಂಶ

ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನದಿಂದ ವಂಚಿತರಾದವರಿದ್ದರೆ ಅವರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಿದ್ದಾಪುರ: ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಎಲ್ಲೆಡೆ ಅಡಕೆ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶ ವಿಸ್ತರಣೆಯಾಗಿದೆ. ಇದೇ ರೀತಿ ಅಡಕೆ ದರ ಪಾತಾಳಕ್ಕೆ ಕುಸಿಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಕೃಷಿಕರು ಅಡಕೆ ಜತೆಗೆ ಉಪಬೆಳೆಗಳನ್ನು ಬೆಳೆಯುವಲ್ಲಿ ಮುಂದಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕಳೆದ ಎರಡೂವರೆ ತಿಂಗಳು ನೀತಿಸಂಹಿತೆ ಕಾರಣದಿಂದ ಸರ್ಕಾರಿ ಕೆಲಸ, ಕಾರ್ಯಗಳು ಸ್ಥಗಿತವಾಗಿದ್ದವು. ಅವುಗಳಿಗೆ ವೇಗ ನೀಡಬೇಕಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನದಿಂದ ವಂಚಿತರಾದವರಿದ್ದರೆ ಅವರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸಬೇಕು ಎಂದರು.

ತಾಲೂಕಿನ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯದಂತೆ ತಕ್ಷಣ ಕ್ರಮ ತೆಗೆದುಕೊಳ್ಳಿ. ಮದ್ಯ ಮಾರುವವನಿಗೆ ಯಾವ ಅಂಗಡಿಯಿಂದ ಪೂರೈಕೆಯಾಗುತ್ತದೆ ಎನ್ನುವುದನ್ನು ಪತ್ತೆ ಮಾಡಿ ತಹಸೀಲ್ದಾರರಿಗೆ ದೂರು ನೀಡಿ. ಅಂಥವರ ಅಂಗಡಿ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಿ ಎಂದು ಅಬಕಾರಿ ಇಲಾಖೆಯವರಿಗೆ ಸೂಚನೆ ನೀಡಿದರು.

ಜಿಪಂ ಇಂಜಿನಿಯರಿಂಗ್ ವಿಭಾಗದವರು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ನೀರು ಹರಿದುಬರದಂತೆ ಗಮನ ಹರಿಸಿ. ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಗಳ ರಸ್ತೆಗಳಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿದುಬಂದದ್ದು ಕಂಡುಬಂದಲ್ಲಿ ಮುಂದಿನ ಆಗುಹೋಗುಗಳಿಗೆ ನೀವೇ ಉತ್ತರ ನೀಡಬೇಕಾಗುತ್ತದೆ. ಅಂಥದ್ದಕ್ಕೆ ಅವಕಾಶ ಕಲ್ಪಿಸಬೇಡಿ ಎಂದರು.

ತಾಪಂ ಆಡಳಿತಾಧಿಕಾರಿ ಪಿ. ಬಸವರಾಜ, ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ತಹಸೀಲ್ದಾರ್‌ ಎಂ.ಆರ್. ಕುಲಕರ್ಣಿ ಉಪಸ್ಥಿತರಿದ್ದರು.

ಸೂಪರ್‌ವೈಸರ್‌: ಕೇವಲ ಮೇನ್ ರೋಡ್‌ನಲ್ಲಿ ಓಡಾಡುವ ಶಾಸಕ ನಾನಲ್ಲ. ನಾನು ನಿಮ್ಮ ಸೂಪರ್‌ವೈಸರ್. ಸೂಪರ್‌ವೈಸರ್ ಶಬ್ದದ ಅರ್ಥ ಚೆನ್ನಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.