ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಅತಿವೃಷ್ಟಿಯಿಂದ ಅಡಕೆಗೆ ವ್ಯಾಪಕವಾಗಿ ಕೊಳೆರೋಗ ಬಂದು ಅಪಾರ ಪ್ರಮಾಣದಲ್ಲಿ ಬೆಳೆನಷ್ಟವಾಗಿದೆ. ಸರ್ಕಾರ ಅಡಕೆ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಗುರುವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಅಡಕೆ ಬೆಳೆಗಾರರು ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಕೊಳೆ ಅಡಕೆ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.೫೨ರಷ್ಟು ಹೆಚ್ಚಿನ ಮಳೆಯಾಗಿದೆ. ಜುಲೈ ತಿಂಗಳೊಂದರಲ್ಲೇ ವಾಡಿಕೆಗಿಂತ ಶೇ.೧೨೨ ರಷ್ಟು ಹೆಚ್ಚು ಮಳೆಯಾಗಿದ್ದು, ಅಡಕೆ ತೋಟಗಳಲ್ಲಿ ಕೊಳೆಯಿಂದಾಗಿ ಫಸಲು ಸಂಪೂರ್ಣ ನಾಶವಾಗಿದೆ. ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಶಾಸಕರು ಜವಾಬ್ದಾರಿ ತೆಗೆದುಕೊಳ್ಳಲಿ:ಹಿಂದೆ ೨೦೧೩-೧೪ರಲ್ಲಿ ಹೀಗೆಯೇ ಕೊಳೆರೋಗದಿಂದ ಅಪಾರ ಪ್ರಮಾಣದಲ್ಲಿ ಬೆಳೆನಷ್ಟವಾಗಿ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಅಂದು ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಈ ಬಗ್ಗೆ ಸರ್ಕಾರದ ಗಮನ ಸೆಳೆದು ಬೆಳೆಗಾರರಿಗೆ ಪರಿಹಾರ ಕೊಡಿಸಿದ್ದರು. ೨೦೧೮-೧೯ರಲ್ಲಿ ಸಹ ಬೆಳೆಗಾರರಿಗೆ ಪರಿಹಾರ ನೀಡಲು ಮುಂದಾಗಿತ್ತು. ಹಾಲಿ ಶಾಸಕರು ಕೂಡ ಮುಂಚೂಣಿಯಲ್ಲಿ ನಿಂತು ಜವಾಬ್ದಾರಿ ತೆಗೆದುಕೊಂಡು ಸರ್ಕಾರದಿಂದ ಅಡಕೆ ಬೆಳೆಗಾರರಿಗೆ ಪರಿಹಾರ ಕೊಡಿಸಬೇಕು. ಈಗಿನ ಬೆಳೆನಷ್ಟಕ್ಕೆ ರಾಜ್ಯ ಸರ್ಕಾರದಿಂದ ಹೆಕ್ಟೇರ್‌ಗೆ ೨೫ ಸಾವಿರರು., ಕೇಂದ್ರ ಸರ್ಕಾರದಿಂದ ಹೆಕ್ಟೇರ್‌ಗೆ ೨೨.೫೦೦ ರು. ಪರಿಹಾರ ನೀಡಬೇಕು. ಮುಂದಿನ ಹದಿನೈದು ದಿನಗಳಲ್ಲಿ ಬೆಳೆಗಾರರಿಗೆ ಪರಿಹಾರ ನೀಡದೆ ಹೋದಲ್ಲಿ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ ಕಣ್ಣೂರು ಮಾತನಾಡಿ, ಕೊಳೆರೋಗದಿಂದ ವಿಪರೀತ ಅಡಕೆ ಬೆಳೆ ನಾಶವಾಗಿದೆ. ಈಗಾಗಲೇ ಶಾಸಕ ಗೋಪಾಲ ಕೃಷ್ಣ ಬೇಳೂರು ತೋಟಗಾರಿಕಾ ಸಚಿವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ನಿಯೋಗ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೆಳೆಗಾರರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಘವು ಗಮನ ಹರಿಸಲಿದೆ ಎಂದು ಹೇಳಿದರು.ಆಪ್ಕೋಸ್ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ ಮಾತನಾಡಿ, ಸಾಗರ, ಸೊರಬ ಮತ್ತು ಹೊಸನಗರ ವ್ಯಾಪ್ತಿಯಲ್ಲಿ ಕೊಳೆಯಿಂದ ಪೂರ್ಣ ಅಡಕೆ ನಾಶವಾಗಿದೆ. ಶೇ.೭೫ರಷ್ಟು ಫಸಲು ಕಳೆದುಕೊಂಡ ಬೆಳೆಗಾರ ತೀವ್ರ ಸಂಕಷ್ಟದಲ್ಲಿದ್ದಾನೆ. ತಕ್ಷಣ ಸರ್ಕಾರ ರೈತರ ನೆರವಿಗೆ ಬರಬೇಕು. ಸೆ.೧೫ರೊಳಗೆ ಪರಿಹಾರ ನೀಡುವ ಮೂಲಕ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಹಿರಿಯ ಸಹಕಾರಿ ಯು.ಎಚ್.ರಾಮಪ್ಪ ಮಾತನಾಡಿದರು. ಪ್ರಮುಖರಾದ ರಾಜೇಂದ್ರ ಖಂಡಿಕಾ, ವೆಂಕಟಗಿರಿ, ಪ್ರಸನ್ನ ಕೆರೆಕೈ, ಅ.ಪು.ನಾರಾಯಣಯಪ್ಪ, ಈಳಿ ಶ್ರೀಧರ್, ರವಿಕುಮಾರ್ ಎಚ್.ಎಂ., ತಿಮ್ಮಪ್ಪ, ಗೌತಮ್ ಕೆ.ಎಸ್., ಗಣೇಶ್ ಇನ್ನಿತರರು ಹಾಜರಿದ್ದರು.ನಮ್ಮ ಹಣ ನಮಗೆ ಕೊಡಿ: ಕೆ.ಸಿ.ದೇವಪ್ಪ
ಪ್ರತಿಭಟನೆಯಲ್ಲಿ ತೋಟಗರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ ಮಾತನಾಡಿ, ರಾಜ್ಯದಲ್ಲಿ ಒಟ್ಟು ೧೪ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಬೆಳೆಯಲಾಗುತ್ತಿದೆ. ಅಡಕೆ ಬೆಳೆಯಿಂದ ಜಿಎಸ್ಟಿ ರೂಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ೯೫ ಲಕ್ಷ ಕೋಟಿ ರು. ಹಣ ಸಂದಾಯವಾಗುತ್ತಿದೆ. ಅತಿವೃಷ್ಟಿಯಂತಹ ಸಂದರ್ಭದಲ್ಲಿ ಬೆಳೆನಷ್ಟವಾದಾಗ ಸರ್ಕಾರ ಈ ಹಣವನ್ನೇ ಬೆಳೆಗಾರರಿಗೆ ಪರಿಹಾರದ ರೂಪದಲ್ಲಿ ನೀಡಿದರೆ ಅಡಕೆ ಬೆಳೆಗಾರರು ಬದುಕಿಕೊಳ್ಳುತ್ತಾರೆ. ಪಾರಂಪರಿಕ ಅಡಕೆ ಬೆಳೆಗಾರರಿಗೂ, ನಾಲಾ ಪ್ರದೇಶದಲ್ಲಿ ಅಡಕೆ ಬೆಳೆಯುವ ಬೆಳೆಗಾರರಿಗೂ ಬಹಳಷ್ಟು ವ್ಯತ್ಯಾಸವಿದೆ. ಪಾರಂಪರಿಕ ಅಡಕೆ ಬೆಳೆಗಾರರಿಗೆ ಉತ್ಪಾದನಾ ವೆಚ್ಚ ಜಾಸ್ತಿ. ಹಾಗಾಗಿಯೇ ಅತಿವೃಷ್ಟಿಯಿಂದ ಬೆಳೆನಷ್ಟವಾದಾಗ ಪಾರಂಪರಿಕ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರ ಈ ಅಂಶವನ್ನು ಗಮನಿಸಿ ಪರಿಹಾರ ನೀಡಬೇಕು ಎಂದು ವಿವರಿಸಿದರು.