ಕನ್ನಡಪ್ರಭ ವಾರ್ತೆ ಮಂಡ್ಯ
ಮನುಷ್ಯರಲ್ಲಿ ಪ್ರಾಣಿಗಳ ಬಗೆಗಿನ ಪ್ರೀತಿ ಹೆಚ್ಚಾಗುತ್ತಿದೆ. ನಾಯಿ, ಬೆಕ್ಕು ಇನ್ನಿತರೆ ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬ ಸದಸ್ಯರಂತೆಯೇ ಅತ್ಯಾಪ್ತ ಭಾವದಿಂದ ಕಾಣುತ್ತಾರೆ. ಅವು ಸಾವಿಗೀಡಾದಾಗ ಅತೀವ ದುಃಖಪಡುತ್ತಾರೆ. ಅವುಗಳನ್ನು ಸದಾ ಸ್ಮರಿಸುತ್ತಲೇ ಇರುತ್ತಾರೆ. ಇದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಗಾಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸ್ನೇಹ ಬಳಗದ ವತಿಯಿಂದ ಕವಿ ಕೆ.ಪಿ.ಮೃತ್ಯುಂಜಯ ವಿರಚಿತ ಜಾಯ್ ಪದ್ಯಗಳು, ಎಲ್.ಸಂದೇಶ್ ಹೊರತಂದಿರುವ ಮಂಡ್ಯ ಎಜುಕೇಷನ್ ಗೈಡ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮನುಷ್ಯರಂತೆ ಪ್ರಾಣಿಗಳು ಕುಟುಂಬದ ಯಜಮಾನನನ್ನು ಪ್ರೀತಿಸುತ್ತವೆ. ಯಜಮಾನ ಕಾಣದಿದ್ದರೆ ಮೂಕರೋಧನ ಅನುಭವಿಸುತ್ತವೆ. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಕೃತಜ್ಞತಾ ಮನೋಭಾವ ಹೆಚ್ಚಿರುತ್ತವೆ. ತನ್ನನ್ನು ಪಾಲನೆ- ಪೋಷಣೆ ಮಾಡಿದ ಕುಟುಂಬದವರನ್ನು ಅತ್ಯಂತ ಗೌರವ, ಅಭಿಮಾನದಿಂದ ಕಾಣುತ್ತಿರುತ್ತವೆ. ಅಂತಹುದೇ ಮಧುರವಾದ ಸಂಬಂಧವನ್ನು ಕೆ.ಪಿ.ಮೃತ್ಯುಂಜಯ ಅವರು ತಮ್ಮ ಸಾಕು ನಾಯಿ ಜಾಯ್‌ನೊಂದಿಗೆ ಹೊಂದಿದ್ದರು ಎಂದು ಹೇಳಿದರು.ನಾನು ಜಿಪಂ ಸದಸ್ಯನಾಗಿದ್ದಾಗಿನಿಂದಲೂ ಕೆ.ಪಿ.ಮೃತ್ಯುಂಜಯ ಪರಿಚಿತರು. ಬಹಳ ಶಿಸ್ತುಬದ್ಧ, ಸರಳ ಮನುಷ್ಯ. ಗುಣದಲ್ಲಿ ಬದಲಾವಣೆಯಾಗದ ವ್ಯಕ್ತಿತ್ವ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಸಾಹಿತಿಯಾಗಿ ಬೆಳವಣಿಗೆ ಸಾಧಿಸುತ್ತಿದ್ದಾರೆ. ಅವರ ನಿವೃತ್ತಿಯ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.
ಆಂಗ್ಲ ಪ್ರಾಧ್ಯಾಪಕ ಪ್ರಸನ್ನಕುಮಾರ್ ಕೆರಗೋಡು ಮಾತನಾಡಿ, ಸಾವಿನ ನಂತರದ ಜೀವನವನ್ನು ಇದುವರೆಗೂ ಯಾರಿಂದಲೂ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಸಂಶೋಧನೆಗಳ ಪ್ರಕಾರ ಆತ್ಮ ಎನ್ನುವುದು ಅಸ್ತಿತ್ವದಲ್ಲಿಲ್ಲ. ಇರುವಾಗಲೇ ಲಿಂಗೈಕ್ಯವಾಗಬೇಕೆಂಬ ಅಲ್ಲಮ ಪ್ರಭುವಿನ ಕವನದಂತೆ ಸಾವಿನ ನಂತರವನ್ನು ಯಾರೂ ಅರಿಯಬಾರದು ಎಂದು ತಿಳಿಸಿದರು.
ಮೃತ್ಯುಂಜಯರವರ ಕವನಗಳಲ್ಲಿ ಶ್ವಾನ ಮತ್ತು ಮನುಷ್ಯರ ನಡುವಿನ ಷರತ್ತು ರಹಿತ ಸಂಬಂಧ ಅನುರಣನಗೊಂಡಿದೆ. ಅದರ ಮೂಲಕ ಇಬ್ಬರ ನಡುವಿನ ಸಾಮಾಜಿಕ ಗೆಳೆತನವನ್ನು ಗುರುತಿಸಬಹುದು. ಮನುಷ್ಯರಂತೆ ಪ್ರಾಣಿಗಳಿಗೂ ಪ್ರಕೃತಿಯೊಂದಿಗೆ ಬೆಳೆಯುವ, ಸ್ವತಂತ್ರವಾಗಿ ಬದುಕುವ, ಬಂಧನದಿಂದ ಬೇರ್ಪಡುವುದನ್ನು ಗಂಭೀರ ಚಿಂತನೆಗೆ ಒಳಪಡಿಸಿದ್ದಾರೆ. ಪ್ರಾಣಿಗಳೂ ಜಾಗತಿಕ ಸ್ವಾತಂತ್ರ್ಯವನ್ನು ಹಂಬಲಿಸುತ್ತಿರುತ್ತವೆ. ಆದರೆ, ಮನುಷ್ಯನ ಸ್ವಾರ್ಥ, ನಾಗರಿಕತೆಯ ಕ್ರೌರ್ಯದ ಬಗ್ಗೆಯೂ ಹೇಳುತ್ತಲೇ ತಮ್ಮ ಮನೆಯ ಜೀವಿಯನ್ನು ದೇವರಾಗಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಾಯ್ ಪದ್ಯಗಳ ಪುಸ್ತಕ ಬಿಡುಗಡೆ ಮಾಡಿ ಕೆ.ಪಿ.ಮೃತ್ಯುಂಜಯ ಅವರನ್ನು ಸಚಿವರು ಅಭಿನಂದಿಸಿದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಂಡ್ಯ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ, ಸಿ.ಎಂ.ದ್ಯಾವಪ್ಪ, ಎಲ್.ಸಂದೇಶ್, ಡಾ.ರಾಜು, ಲಿಂಗಪ್ಪ ಇತರರಿದ್ದರು.ಎಲ್.ಸಂದೇಶ್‌ರವರ ಮಂಡ್ಯ ಎಜುಕೇಷನ್ ಗೈಡ್ ಬಿಡುಗಡೆ
ಮಂಡ್ಯ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸಮಗ್ರ ವಿವರಗಳನ್ನೊಳಗೊಂಡ ಮಂಡ್ಯ ಎಜುಕೇಷನ್ ಗೈಡ್ ಎಂಬ ಪುಸ್ತಕವನ್ನು ಲೇಖಕ ಎಲ್.ಸಂದೇಶ್ ಹೊರತಂದಿದ್ದು, ಅದನ್ನು ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.ಪುಸ್ತಕ ಕುರಿತು ಮಾತನಾಡಿದ ಸಚಿವರು, ಇದೊಂದು ಅಪರೂಪ ಮತ್ತು ವಿಭಿನ್ನ ರೀತಿಯ ಪುಸ್ತಕವಾಗಿದೆ. ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ವಿವರಗಳನ್ನು ಒಳಗೊಂಡು ಹೊರತಂದಿದ್ದು, ಸಂಗ್ರಹಯೋಗ್ಯ ಪುಸ್ತಕ ಎಂದು ನುಡಿದರು.