ಒಬ್ಬ ಕಲಾವಿದ ತನಗೆ ವಿದ್ಯೆ ಕಲಿಸಿದ ಗುರುವಿನ ಎದುರು ಬೆಳೆದು ಉತ್ತಮ ಕಾರ್ಯಕ್ರಮ ನೀಡುವಂತಾಗುವುದೇ ನಿಜವಾದ ಗುರು ಕಾಣಿಕೆ ಎಂದು ಬೆಂಗಳೂರಿನ ಖ್ಯಾತ ಹಾರ್ಮೋನಿಯಂ ವಾದಕರಾದ ಡಾ.ರವೀಂದ್ರ ಕಾಟೋಟಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಾಗರ
ಒಬ್ಬ ಕಲಾವಿದ ತನಗೆ ವಿದ್ಯೆ ಕಲಿಸಿದ ಗುರುವಿನ ಎದುರು ಬೆಳೆದು ಉತ್ತಮ ಕಾರ್ಯಕ್ರಮ ನೀಡುವಂತಾಗುವುದೇ ನಿಜವಾದ ಗುರು ಕಾಣಿಕೆ ಎಂದು ಬೆಂಗಳೂರಿನ ಖ್ಯಾತ ಹಾರ್ಮೋನಿಯಂ ವಾದಕರಾದ ಡಾ.ರವೀಂದ್ರ ಕಾಟೋಟಿ ಅಭಿಪ್ರಾಯಪಟ್ಟರು.ಸ್ವರಸಿರಿ ಹಿಂದೂಸ್ಥಾನಿ ಸಂಗೀತ ವಿದ್ಯಾಲಯ ಇಲ್ಲಿನ ಅಜಿತ್ ಸಭಾಭವನದಲ್ಲಿ ಏರ್ಪಡಿಸಿದ್ದ ೫ನೇ ವರ್ಷದ ಸ್ವರಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಕಲಿತು ಬೇರೆ ಕಡೆ ಎಲ್ಲಿಯೋ ಕಾರ್ಯಕ್ರಮ ನೀಡುವುದು ಅಥವಾ ತಾವು ಕೂಡ ಕಲಿಸುವುದು ಸಾಮಾನ್ಯ. ಆದರೆ ಗುರುವಿರುವ ಸ್ಥಳದಲ್ಲಿಯೇ ಶಿಷ್ಯರು ಹಿರಿಮೆ ತೋರುವುದು ಅಪರೂಪ. ಇಲ್ಲಿ ಹಿಂದೂಸ್ತಾನಿ ಸಂಗೀತ ಕಲಿತು ಈಗ ತಾವು ತರಗತಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ನಾಲ್ಕು ತಲೆಮಾರಿನ ಕಲಾವಿದರ ಸಂಗಮ ಇಲ್ಲಿ ಆಗಿದೆ. ಇದು ಕಲೆಯ ಉತ್ಕರ್ಷವನ್ನು ತಿಳಿಸುತ್ತದೆ ಎಂದರು.ವಿದುಷಿ ವಸುಧಾಶರ್ಮ ಅಧ್ಯಕ್ಷತೆ ವಹಿಸಿದ್ದರು. ತಬಲ ಗುರು ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ, ಸ್ವರಸಿರಿ ಪ್ರಾಧ್ಯಾಪಕಿ ಸುಜಾತಾ ಅಶೋಕ, ಮಂಗಲಾಗಿರೀಶ್, ಮಹಾಲಕ್ಷ್ಮಿ ಸುದರ್ಶನ ಮತ್ತಿತರರು ಇದ್ದರು.
ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, ಸುಭೋಧ್ ಪಿ.ರಾವ್ ರವರಿಂದ ಬಾನ್ಸುರಿ ವಾದನ, ಸುಜಾತಾ ಅಶೋಕರವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ವಿದುಷಿ ವಸುಧಾಶರ್ಮಾರವರಿಂದ ಗಾಯನ ನಡೆಯಿತು. ಗುರುರಾಜ್ ಆಡುಕಳ, ಅಜಯ ಹೆಗಡೆ ಶಿರಸಿ, ವಿನಾಯಕ ಸಾಗರ್, ಶ್ರೀರಂಜಿನಿ ಮೊದಲಾದ ಕಲಾವಿದರು ಸಾಥ್ ನೀಡಿದರು. ಶ್ರೀಹರಿ ಪ್ರಸಾದ್, ಶ್ರೀನಂದ, ಶ್ರೀವತ್ಸ, ಸುಬೋಧ್, ಅಮಾತ್ಯರವರಿಂದ ವಾದ್ಯ ನಾದ ವೈವಿಧ್ಯ ಕಾರ್ಯಕ್ರಮ ನಡೆಯಿತು.