ಸಾರಾಂಶ
ವಿಶ್ವ ಅರಣ್ಯ ದಿನದ ಅಂಗವಾಗಿ ಶ್ರೀಗಂಧ ಮೆಕಡೋಮಿಯ ಸಸಿ ನೆಡುವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಹೆಚ್ಚು ಗಿಡ ಮತ್ತು ಮರಗಳನ್ನು ಬೆಳೆಯುವುದರಿಂದ ನಮ್ಮ ಪರಿಸರ ಉತ್ತಮವಾಗಿರುತ್ತದೆ ಎಂದು ಪಟ್ಟಣದ ಯಶಸ್ವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ , ಶ್ರೀಗಂಧ ಬೆಳೆಗಾರ ಟಿ.ಎನ್. ವಿಶುಕುಮಾರ್ ಹೇಳಿದ್ದಾರೆ.
ಶುಕ್ರವಾರ ತರೀಕೆರೆಯ ಯಶಸ್ವಿ ಚಾರಿಟಬಲ್ ಟ್ರಸ್ಟ್ ನಿಂದ ವಿಶ್ವ ಅರಣ್ಯ ದಿನದ ಅಂಗವಾಗಿ ಸಮೀಪದ ಕಲ್ಲತ್ತಿಗಿರಿ ಸರ್ಕಲ್ ಗಂಧದ ಗುಡಿ-6 ಏರ್ಪಡಿಸಿದ್ದ ಫಾರಂ ಪ್ಲಾಟ್.ನಲ್ಲಿ ಶ್ರೀಗಂಧ ಮತ್ತು ಮೆಕಡೋಮಿಯ ಮತ್ತು ವಿವಿಧ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ವಿಶ್ವ ಅರಣ್ಯ ದಿನದ ಅಂಗವಾಗಿ ಶ್ರೀಗಂಧ, ಮೆಕಡೋಮಿಯ ಮತ್ತು ವಿವಿಧ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ನನ್ನ ಮಕ್ಕಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಶ್ರೀಗಂಧದ ಹುಟ್ಟುಹಬ್ಬ ಎಂದು ಅಚರಿಸಿಕೊಂಡು ಬರಲಾಗುತ್ತಿದೆ. 2005ರಿಂದ ಇಂದಿನವರೆಗೆ ಸುಮಾರು 60 ಎಕರೆ ಪ್ರದೇಶಗಳಲ್ಲಿ 2000 ಶ್ರೀಗಂಧದ ಮರಗಳು, 200 ಮಾವಿನ ಮರಗಳು ನೂರು ಸಪೋಟ ಮರಗಳು, ತೆಂಗು ಅಡಕೆಯಲ್ಲಿ ಇನ್ನಿತರೆ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಬಂದಿರುತ್ತೇನೆ ಎಂದು ಹೇಳಿದರು.ನಿರಂತರ ಫಸಲುಃ ಹೆಚ್ಚಾಗಿ ಶ್ರೀಗಂಧ ಬೆಳೆಯುವುದರಿಂದ ಪರಿಸರ ಉಳಿಯುವ ಜೊತೆಗೆ ನಮಗೂ ಕೂಡ ಅರ್ಥಿಕವಾಗಿ ಶ್ರೀಮಂತರಾಗಲು ಅನುಕೂಲವಾಗುತ್ತದೆ. ಮೆಕಡೋಮಿಯಾದಿಂದ ವರ್ಷಕ್ಕೆ ಎರಡು ಬಾರಿ ಫಸಲು ದೊರೆಯುವುದರಿಂದ ಹತ್ತು ವರ್ಷದ ಒಂದು ಮರದಲ್ಲಿ ವಾರ್ಷಿಕವಾಗಿ 25 ಸಾವಿರದಿಂದ 1 ಲಕ್ಷದ ವರೆಗೆ ಆದಾಯ ಬರುತ್ತದೆ. 5 ವರ್ಷದಿಂದ ಆದಾಯ ಪ್ರಾರಂಭವಾಗಿ ನೂರು ವರ್ಷದವರೆಗೂ ನಿರಂತರವಾಗಿ ಫಸಲು ಕೊಡುತ್ತಿರುತ್ತದೆ ಎಂದು ವಿವರಿಸಿದರು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್. ಜಿ. ರಮೇಶ್ ಗೋವಿಂದೆ ಗೌಡ ಮಾತನಾಡಿ, ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿ ತರೀಕೆರೆ ಹೆಸರಾಂತ ಪರಿಸರ ಪ್ರೇಮಿ ಶ್ರೀಗಂಧದ ಮರಗಳನ್ನು ಬೆಳೆಸುವ ವಿಶುಕುಮಾರ್ ತನ್ನ ತಮ್ಮನ ಮಗಳ ಹುಟ್ಟುಹಬ್ಬ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಶ್ರೀಗಂಧದ ಗಿಡಗಳನ್ನು ನೆಡುವ ಮುಖಾಂತರ ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಆಚರಿಸಿರುವುದು ಪ್ರತಿಯೊಬ್ಬರಿಗೂ ಮಾದರಿ ಎಂದರು. ನಮ್ಮ ಕರ್ನಾಟಕ ಗಂಧದ ಗುಡಿ ಎಂದೇ ಹೆಸರಾಗಿರುವುದು ವಿಶೇಷ, ಭಾರತೀಯ ಚಿತ್ರರಂಗದಲ್ಲೇ ಅತ್ಯದ್ಭುತವಾಗಿ ನಮ್ಮ ಕನ್ನಡದ ಚಿತ್ರರಂಗವನ್ನು ಸ್ಯಾಂಡಲ್ ವುಡ್ ಎಂದು ಕರೆಯುತ್ತಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಮ್ಮೆಲ್ಲರ ಹೆಮ್ಮೆಯ ನಟ ಡಾ. ರಾಜಕುಮಾರ್ ಕನ್ನಡ ನಾಡನ್ನು ಗಂಧದಗುಡಿ ಎಂದು ಕರೆದಿರುವುದು ಸೂಕ್ತ. ಗಂಧದ ಮರಗಳಿಗೂ ಮತ್ತು ನಮ್ಮ ಕರ್ನಾಟಕ ನಾಡಿಗೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು. ಪ್ರತಿಯೊಬ್ಬರು ಅವರವರ ಜಮೀನುಗಳಲ್ಲಿ ಮತ್ತು ಸರ್ಕಾರಿ ಕಚೇರಿ, ಶಾಲೆ, ದೇವಸ್ಥಾನ ಇನ್ನು ಮುಂತಾದ ಜಾಗಗಳಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸುವಂತಾಗಬೇಕು. ಮುಂದಿನ ಪೀಳಿಗೆ ಜನರಿಗೆ ವಿಶುಕುಮಾರ್ ಮಾದರಿ. ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಪುಟಾಣಿ ಕಂದನಿಗೂ ಹಾಗೂ ವಿಶ್ವ ಪರಿಸರ ದಿನಾಚರಣೆಗೆ ಶುಭ ಹಾರೈಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹಳಿಯೂರು ಎಚ್.ಎಸ್.ಸೋಮಶೇಖರ್ ಮಾತನಾಡಿ ತಾಪಮಾನ ತಡೆಯಲು ಮತ್ತು ಅಳಿವಿನಂಚಿನಲ್ಲಿರುವ ಅರಣ್ಯ ಉಳಿಸಿ ಬೆಳೆಸಲು ಪ್ರತಿಯೊಬ್ಬ ನಾಗರಿಕರು ಪ್ರಯತ್ನಿಸಬೇಕು ಎಂದು ಹೇಳಿದರು.
ಪುಟಾಣಿ ಜೀವಿತಾ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪುರಸಭಾ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ, ಗಿರಿಜಮ್ಮ ನಾಗರಾಜ್, ಅಶ್ವಿನಿ ರಘು, ಅನಿವಾಸಿ ಭಾರತೀಯರಾದ ಡೇವಿಡ್ ಬರ್ಡ್, ತಿಗಡ ಗ್ರಾಪಂ ಉಪಾಧ್ಯಕ್ಷ ಮುರುಗ. ಪಂಚಾಯಿತಿ ಸದಸ್ಯರಾದ ಸುದೀಪ್, ಜಯ್ಯಣ್ಣ, ನವೀನ್, ರಘು, ಮೂರ್ತಿ ಮತ್ತಿತರರು ಭಾಗವಹಿಸಿದ್ದರು21ಕೆಟಿಆರ್.ಕೆ.10ಃ
ತರೀಕೆರೆ ಸಮಿಪದ ಕಲ್ಲತ್ತಿಗಿರಿ ಸರ್ಕಲ್ ಗಂಧದ ಗುಡಿ-6 ರಲ್ಲಿ ವಿಶ್ವ ಅರಣ್ಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಂಧ ಮೆಕಡೋಮಿಯ ಸಸಿ ನೆಡಲಾಯಿತು. ಯಶಸ್ವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀಗಂಧ ಬೆಳೆಗಾರರಾದ ಟಿ.ಎನ್. ವಿಶುಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ್ ಮತ್ತಿತರರು ಇದ್ದರು.