ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ: ಅಶೋಕ ಪಟ್ಟಣ

| Published : Jul 12 2024, 01:39 AM IST

ಸಾರಾಂಶ

ಬೆಳೆಯುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಜನರು ಜಾಗೃತರಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು. ಅಂದರೆ ಮಾತ್ರ ದೇಶ ಸದೃಢವಾಗಿ ವಿಶ್ವದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬೆಳೆಯುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಜನರು ಜಾಗೃತರಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು. ಅಂದರೆ ಮಾತ್ರ ದೇಶ ಸದೃಢವಾಗಿ ವಿಶ್ವದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಜವಾರಿ ಆಹಾರ ಸೇವಿಸಿದ್ದ ಜನರು ಗಟ್ಟಿಮುಟ್ಟಾಗಿ ಇರುತ್ತಿದ್ದರು. ೮-೧೦ ಮಕ್ಕಳಿಗೆ ಜನ್ಮ ನೀಡಿದರೂ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದು ರಾಸಾಯನಿಕ ಮಿಶ್ರಿತ ಆಹಾರ ಸೇವಿಸಿದ ಪರಿಣಾಮ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಕಡಿಮೆ ಮಕ್ಕಳು ಇದ್ದಷ್ಟು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಒಳ್ಳೆಯ ಪ್ರಜೆಗಳನ್ನಾಗಿ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗೆ ಬಡವರು ಬರುತ್ತಾರೆ. ಅವರಿಗೆ ವೈದ್ಯರು ನೀಡುವ ಸೇವೆಯ ಜೊತೆಗೆ ಸೌಜನ್ಯದ ನಡುವಳಿಕೆ ಅಗತ್ಯವಿದೆ. ವೈದ್ಯರು ಮಾನವೀಯತೆ ಮರೆತು ಹಣದ ಬೆನ್ನು ಹತ್ತದೆ ಒಳ್ಳೆಯ ಸೇವೆ ನೀಡಿದರೆ ದೇವರು ಒಳ್ಳೇಯದನ್ನು ಮಾಡುತ್ತಾನೆ ಎನ್ನುವದನ್ನು ಅರಿತು ಸೇವೆ ಸಲ್ಲಿಸಲು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ವೈದ್ಯಾಧಿಕಾರಿ ಡಾ.ನವೀನ ನಿಜಗುಲಿ ಮಾತನಾಡಿ, ಜನಸಂಖ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರಲ್ಲದೆ, ತಾಲೂಕಿನ ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿ ಮಾದರಿ ಆಸ್ಪತ್ರೆ ಮಾಡಲು ಶ್ರಮಿಸುವದಾಗಿ ಹೇಳದರು.

ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಆರ್‌ಎಫ್‌ಒ ಭಾಗ್ಯಶ್ರೀ ಮಸಳಿ, ವೈದ್ಯರಾದ ವರುಣ ಬೀಳಗಿ, ಬಾಳಿ, ಮಂಜುನಾಥ ಭಜಂತ್ರಿ ಸೇರಿದಂತೆ ಹಲವರಿದ್ದರು.