ಸಾರಾಂಶ
ಪತ್ತಿನ ಸಹಕಾರ ಸಂಘಗಳು ಆರ್ಥಿಕ ಶಿಸ್ತಿನಿಂದ ಕಾರ್ಯನಿರ್ವಹಿಸಿ, ಆರೋಗ್ಯಕರವಾಗಿ ಬೆಳೆಸಬೇಕು. ಆರ್ಥಿಕ ಸದೃಢತೆ ಹೆಚ್ಚಿಸಿಕೊಂಡು ಲಾಭಾಂಶದಲ್ಲಿ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ಸಮಾಜಕ್ಕೂ ನೆರವಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಪತ್ತಿನ ಸಹಕಾರ ಸಂಘಗಳು ಆರ್ಥಿಕ ಶಿಸ್ತಿನಿಂದ ಕಾರ್ಯನಿರ್ವಹಿಸಿ, ಆರೋಗ್ಯಕರವಾಗಿ ಬೆಳೆಸಬೇಕು. ಆರ್ಥಿಕ ಸದೃಢತೆ ಹೆಚ್ಚಿಸಿಕೊಂಡು ಲಾಭಾಂಶದಲ್ಲಿ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ಸಮಾಜಕ್ಕೂ ನೆರವಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.ಭಾನುವಾರ ನಗರದ ಹೊರಪೇಟೆಯ ಶ್ರೀ ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಸಹಕಾರ ಸಂಸ್ಥೆಗಳು ನೂರಕ್ಕೆ ನೂರರಷ್ಟು ಸಾಲ ವಸೂಲಾತಿಗೆ ಮಾಡದಿದ್ದರೆ ಬೆಳವಣಿಗೆ ಕಷ್ಟವಾಗುತ್ತದೆ. ಈ ಬಗ್ಗೆ ಸಂಸ್ಥೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಾಳಜಿಯಿಂದ ಕೆಲಸ ಮಾಡಬೇಕು, ಸಹಕಾರ ನಿಯಮಾವಳಿಗಳನ್ನು ಪಾಲಿಸಿಕೊಂಡು ಬ್ಯಾಂಕಿಂಗ್ ಕ್ಷೇತ್ರದ ಬದಲಾವಣೆಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಇರುವಷ್ಟು ಸಹಕಾರ ಸಂಘಗಳು ಇನ್ಯಾವ ಜಿಲ್ಲೆಗಳಲ್ಲೂ ಇಲ್ಲ. ಈ ಜಿಲ್ಲೆಯ ಬಹುತೇಕ ಎಲ್ಲಾ ಸಮುದಾಯದವರು ಸಹಕಾರ ಸಂಘಗಳನ್ನು ಸ್ಥಾಪಿಸಿದ್ದಾರೆ. ಸಣ್ಣಸಣ್ಣ ಸಮುದಾಯಗಳು ಸಾಲ ಸೌಲಭ್ಯಕ್ಕೆ ದೊಡ್ಡ ಬ್ಯಾಂಕುಗಳ ಬಳಿ ಹೋಗುವುದನ್ನು ತಪ್ಪಿಸಿ, ತಮ್ಮದೇ ಸಂಸ್ಥೆಯಲ್ಲಿ ಸಾಲ ಪಡೆದು ತಮ್ಮ ಆರ್ಥಿಕ ಚಟುವಟಿಕೆ ನಡೆಸಿ ಲಾಭ ಮಾಡಿ ಸಾಲವನ್ನು ವಾಪಸ್ ನೀಡಿ ಸಂಸ್ಥೆಯನ್ನೂ ಬೆಳೆಸಲು ನೆರವಾಗಬೇಕು ಎಂದು ಕೆ.ಎನ್. ರಾಜಣ್ಣ ಹೇಳಿದರು.ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಹೆಚ್.ಶಿವಾನಂದ್ ಮಾತನಾಡಿದರು.
ಪ್ರಾಚೀನ ಕಾವ್ಯಗಳ ಪ್ರವಚನಾಕಾರ ಮುರಳಿಕೃಷ್ಣಪ್ಪ, ಸಂಘದ ಉಪಾಧ್ಯಕ್ಷ ಎಸ್.ಎನ್.ಎಸ್. ಬಸವರಾಜು, ನಿರ್ದೇಶಕ ಬಿ.ಎನ್. ಜಯಚಂದ್ರ, ಎಸ್.ಎನ್. ಸೋಮಶೇಖರ್, ಬಿ.ಎಲ್.ಗೋವಿಂದಶೆಟ್ಟಿ, ಟಿ.ಆರ್. ದಿನೇಶ್‌ಕುಮಾರ್, ಎಸ್.ಎನ್. ಕೃಷ್ಣಮೂರ್ತಿ, ಟಿ.ಪಿ. ಜಗದೀಶ್, ಜಿ.ಆರ್. ಮುಕ್ತಾಂಭ, ಯಶೋದ, ಎಸ್. ಕಮಲಾ ಇದ್ದರು.