ಗೃಹಲಕ್ಷ್ಮಿ ಯೋಜನೆಯಡಿ ಆಧಾರ್ ಆಧಾರಿತ ಮುಖದ ದೃಢೀಕರಣ ಕೈಗೊಳ್ಳಬೇಕಾಗಿರುವುದರಿಂದ ಮನೆ ಭೇಟಿಯ ಸಂದರ್ಭ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಮೀಪದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಇತರೆ ನಿಗದಿತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಸಹಕಾರ ಪಡೆಯಬೇಕು. ಫಲಾನುಭವಿಗಳು ತಮ್ಮ ಗೃಹಲಕ್ಷ್ಮಿ ಆದೇಶ ಸಂಖ್ಯೆ ಸಹ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಸೂಚಿಸಿದ್ದಾರೆ.
ಮಡಿಕೇರಿ : ಗೃಹಲಕ್ಷ್ಮಿ ಯೋಜನೆಯಡಿ ಆಧಾರ್ ಆಧಾರಿತ ಮುಖದ ದೃಢೀಕರಣ ಕೈಗೊಳ್ಳಬೇಕಾಗಿರುವುದರಿಂದ ಮನೆ ಭೇಟಿಯ ಸಂದರ್ಭ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಮೀಪದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಇತರೆ ನಿಗದಿತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಸಹಕಾರ ಪಡೆಯಬೇಕು. ಫಲಾನುಭವಿಗಳು ತಮ್ಮ ಗೃಹಲಕ್ಷ್ಮಿ ಆದೇಶ ಸಂಖ್ಯೆ ಸಹ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಸೂಚಿಸಿದ್ದಾರೆ.ಸಿಂಕೋನ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಕುರಿತು ಮಾಹಿತಿ ನೀಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ನಂತರ ಫಲಾನುಭವಿಗಳ ಮನೆ ಭೇಟಿ ಪ್ರಾರಂಭವಾಗಲಿದ್ದು, ಫಲಾನುಭವಿಗಳು ತಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಿಸಿಕೊಳ್ಳುವಂತೆ ತಿಳಿಸಿದರು. ಸಾಲವಿಲ್ಲದ ಬ್ಯಾಂಕ್ ಖಾತೆಯ ವಿವರ ಸಿದ್ಧವಾಗಿಟ್ಟುಕೊಳ್ಳಬೇಕು. ಈಗಿರುವ ಖಾತೆಯಲ್ಲಿ ಸಾಲವಿದ್ದಲ್ಲಿ, ಜಂಟಿ ಖಾತೆ ಅಥವಾ ಸಂಘದ ಖಾತೆಯಾಗಿದ್ದಲ್ಲಿ ಹೊಸ ವೈಯಕ್ತಿಕ ಬ್ಯಾಂಕ್ ಖಾತೆ ಅಥವಾ ಐಪಿಪಿಬಿ ಖಾತೆ ತೆರೆಯುವಂತೆ ಸಲಹೆ ನೀಡಿದರು. ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿ ವಿವರ ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿದರು.
ಗರ್ಭಾವಸ್ಥೆಯಿಂದ ಮಗುವಿನ ಎರಡು ವರ್ಷದವರೆಗಿನ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ದೊರೆಯಬೇಕಾದ ಪೌಷ್ಟಿಕ ಆಹಾರದ ಮಹತ್ವ ವಿವರಿಸಿದರು. ಗರ್ಭಿಣಿಯರು ಹಾಗೂ ಬಾಣಂತಿಯರು ಸಮತೋಲನ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯ ತಪಾಸಣೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಫಲಾನುಭವಿಗಳ ಸೀಮಂತ ಕಾರ್ಯಕ್ರಮ ನೆರವೇರಿಸಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ತಾಯಿಯ ಆರೋಗ್ಯಕ್ಕಾಗಿ ನೇರ ನಗದು ವರ್ಗಾವಣೆ, ಭಾಗ್ಯಲಕ್ಷ್ಮಿ ಯೋಜನೆ, ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆ, ಪೌಷ್ಟಿಕ ಆಹಾರ, ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳು, ಸ್ವಚ್ಛತೆ ಹಾಗೂ ಮಗುವಿನ ಲಸಿಕೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಮೂಢನಂಬಿಕೆಗಳಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಿ, ವೈಜ್ಞಾನಿಕ ಮನೋಭಾವದಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದರು.ಉಪ ನಿರ್ದೇಶಕರ ಕಚೇರಿಯ ಜಯಂತಿ ಅವರು ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೊಂಡಿರುವ ಹೊಸ ಆಹಾರ ಮೆನು ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಕೀನ ಕಾರ್ಯಕ್ರಮ ನಿರೂಪಿಸಿದರು, ಧರಣಿ ಸ್ವಾಗತಿಸಿ ಪುಷ್ಪ ವಂದಿಸಿದರು.ಚೇರಂಬಾಣೆ ವೃತ್ತಕ್ಕೆ ಸಂಬಂಧಿಸಿದ 30 ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಂಕೋನ ಗ್ರಾಮದ ಗರ್ಭಿಣಿ ಮತ್ತು ಇತರೆ ಫಲಾನುಭವಿಗಳು ಭಾಗವಹಿಸಿದ್ದರು.