ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆಯಾಗಿ ಚೈತನ್ಯದಾಯಿಯಾಗಲಿದೆ.
ಮಂಗಳೂರು: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆಯಾಗಿ ಚೈತನ್ಯದಾಯಿಯಾಗಲಿದೆ. ವೇದಿಕೆಯ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸಮಾಜದ ಎಲ್ಲರೂ ಒಮ್ಮನಿಸ್ಸಿನಿಂದ ಕೈಜೋಡಿಸಿದರೆ ಈ ಮಹತ್ವಕಾಂಕ್ಷಿ ಯೋಜನೆ ಆದಷ್ಟು ಶೀಘ್ರ ನೆರವೇರಲಿದೆ ಎಂದು ವೇದಮೂರ್ತಿ ಎಂ.ವಿಠ್ಠಲ ಭಟ್ ಶುಭ ಹಾರೈಸಿದರು.
ಅವರು ಮಂಗಳೂರು ರಥ ಬೀದಿಯ ಶ್ರೀ ಕುಡ್ತೇರಿ ಮಹಾಮಾಯ ದೇವಸ್ಥಾನದ ಸಭಾಗೃಹದಲ್ಲಿ ಶನಿವಾರ ನಡೆದ ವಯೋ ವಂದನ ಆತಿಥ್ಯ ಗೃಹ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಉಡುಪಿ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ, ನಿವಾಸಿಗಳಿಗೆ ಊಟೋಪಚಾರ, ವಸತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯದ ಜೊತೆಗೆ ಜೀವನೋತ್ಸಾಹವನ್ನು ಹೆಚ್ಚಿಸುವ ನಿರಂತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಭವ ಡಿಸೈನ್ ಸ್ಟುಡಿಯೋ ಮಣಿಪಾಲದ ಸಿವಿಲ್ ಎಂಜಿನಿಯರ್ ಕುಂದಾಪುರದ ಸಚಿತ್ ಪೈ ಯವರು ವಾಸ್ತು ವಿನ್ಯಾಸ ಮತ್ತು ಕಟ್ಟಡ ನಿರ್ಮಾಣ ಸಲಹೆಗಾರರಾಗಿದ್ದು, ಪ್ರತಿ ಮಹಡಿಯಲ್ಲಿ 24 ಕೊಠಡಿ ಗಳಂತೆ ಒಟ್ಟು 72 ಕೊಠಡಿಗಳ 144 ಮಂದಿ ಹಿರಿಯರಿಗೆ ವಾಸಿಸಲು ಅನುಕೂಲವಾಗುವ 56 ಸಾವಿರ ಚದರಡಿಯ ಕಟ್ಟಡದ ವಾಸ್ತು ವಿನ್ಯಾಸ ಮತ್ತು ಸೌಲಭ್ಯಗಳ ವಿವರ ನೀಡಿದರು.ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಹಾಗೂ ವಯೋವಂದನ ಅತಿಥಿಗೃಹ ಯೋಜನೆಯ ರೂವಾರಿ ಆರ್. ವಿವೇಕಾನಂದ ಶೆಣೈ ಪ್ರಾಸ್ತಾವಿಕದಲ್ಲಿ, ಕಳೆದ 14 ವರ್ಷಗಳಿಂದ ಕುಟುಂಬ ಚೈತನ್ಯ ನಿಧಿ, ವಿದ್ಯಾ ಪೋಷಕ ನಿಧಿ, ಪ್ರತಿಭಾ ಪುರಸ್ಕಾರ, ಆರೋಗ್ಯ ಚೈತನ್ಯ ನಿಧಿ, ಜಿಎಸ್‌ಬಿ ಗೃಹ ನಿರ್ಮಾಣ ಯೋಜನೆ, ಉಚಿತ ಗುಂಪು ಆರೋಗ್ಯ ವಿಮಾ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಿಂದ ಪ್ರಾರಂಭಿಸಿ ದಕ್ಷಿಣ ಕನ್ನಡ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನದ ಅಧ್ಯಕ್ಷ ಸಿಎ ಎಸ್. ಎಸ್. ನಾಯಕ್ ಅವರು, ತಮ್ಮ ತಾಯಿಯ ಹುಟ್ಟುಹಬ್ಬದ ದಿನದ ಸಂಕಲ್ಪದಂತೆ ಒಂದು ಕೊಠಡಿಯ ದೇಣಿಗೆ 8 ಲಕ್ಷ ರು.ಗಳ ಚೆಕ್ಕನ್ನು ಹಸ್ತಾಂತರಿಸಿದರು.ಉಡುಪಿ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್, ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ಗಣೇಶ್ ಕಾಮತ್, ಕಿರಣ ಪೈ, ಕುವೈಟ್ ಜಿಎಸ್‌ಬಿ ಸಮಾಜದ ಪ್ರಮುಖರಾದ ಮಂಜೇಶ್ವರ ಮೋಹನ್ ದಾಸ್ ಕಾಮತ್, ಮಂಗಳೂರಿನ ಸಮಾಜ ಸೇವಕಿ ಪುಷ್ಪಾ ಪ್ರಭು, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಂಚಾಲಕ ಮೂಡುಬಿದಿರೆ ವಿಜಯಕುಮಾರ್ ಶೆಣೈ ಬೆಂಗಳೂರು ಇದ್ದರು.ವಯೋವಂದನ ಯೋಜನೆಯ ಮಂಗಳೂರು ವಲಯ ಸಂಚಾಲಕ ರಘುನಾಥ ಪ್ರಭು ಸ್ವಾಗತಿಸಿದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.
ಸಹ ಸಂಚಾಲಕ ಸುಬ್ರಹ್ಮಣ್ಯ ಪ್ರಭು ವಂದಿಸಿದರು.ಏನಿದು ವಯೋವಂದನ ಯೋಜನೆ?: ವಯೋವಂದನ ಆತಿಥ್ಯ ಗೃಹ ಯೋಜನೆ ವೇದಿಕೆಯ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಪ್ರಮುಖವಾಗಿ ಸಮಾಜದ ಮಕ್ಕಳಿಲ್ಲದ ಹಿರಿಯರಿಗೆ ಉಚಿತ ವಾಸ್ತವ್ಯ ಕಲ್ಪಿಸುವ ಸದುದ್ದೇಶದಿಂದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮಕ್ಕಳು ವಿದೇಶದಲ್ಲಿದ್ದು ಒಂಟಿತನ ಕಾಡುವ ದಂಪತಿಗಳಿಗೆ ಕೂಡಾ ನಿಗದಿತ ಶುಲ್ಕದೊಂದಿಗೆ ಅವಕಾಶ ನೀಡಲಾಗುವುದು ಎಂದು ವಿವೇಕಾನಂದ ಶೆಣೈ ತಿಳಿಸಿದರು.
------------