ಸಾರಾಂಶ
ದೇಶದ ಹಿತದೃಷ್ಟಿಯಿಂದ ಕ್ರಾಂತಿಕಾರಕ ನಿರ್ಧಾರವಾಗಿದೆ
ಯಲ್ಲಾಪುರ: ಜಿಎಸ್ಟಿಯ ಎರಡನೇ ಹಂತದ ಸುಧಾರಣಾ ಕ್ರಮದ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶದ ಹಿತದೃಷ್ಟಿಯಿಂದ ಕ್ರಾಂತಿಕಾರಕ ನಿರ್ಧಾರವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂರು ಹಂತದ ಜಿ.ಎಸ್.ಟಿ ಸ್ಲ್ಯಾಬ್‌ನ್ನು ಎರಡು ಹಂತಕ್ಕೆ ಇಳಿಸಲಾಗಿದೆ. ಶೇ.೯೦ರಷ್ಟು ವಸ್ತುಗಳು ಶೇ.೧೮ ಸ್ಲ್ಯಾಬ್‌ಗೆ, ಶೇ.೧೨ ಇದ್ದ ವಸ್ತುಗಳು ದರವನ್ನು ಶೇ.೫ ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.ಜನಸಾಮಾನ್ಯರಿಗೆ ಇದರ ನೇರ ಉಪಯೋಗ ದೊರೆಯಲಿದೆ. ಆಹಾರೋತ್ಪನ್ನ, ವಿಮೆ ಹಾಗೂ ಅಗತ್ಯ ಔಷಧಗಳನ್ನು ಸಂಪೂರ್ಣ ತೆರಿಗೆ ಮುಕ್ತ ಮಾಡಿರುವುದು ಎಲ್ಲರಿಗೂ ಉಪಯುಕ್ತವಾಗಿದೆ. ಇನ್ನೂ ಒಂದು ಹಂತದಲ್ಲಿ ಜಿ.ಎಸ್.ಟಿ ಸುಧಾರಣೆಯ ಬಗ್ಗೆಯೂ ಕೇಂದ್ರ ಸರ್ಕಾರ ಸುಳಿವು ನೀಡಿದೆ.
ದೇಶದ ಆರ್ಥಿಕ ಸ್ಥಿತಿ ಆಶಾದಾಯಕವಾಗಿದೆ. ದೇಶ ಪ್ರಗತಿಯ ದಾಪುಗಾಲು ಹಾಕುತ್ತಿರುವ ಸಂದೇಶವನ್ನು ಈ ಮೂಲಕ ಪ್ರಪಂಚಕ್ಕೇ ಕೇಂದ್ರ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರ ಕೇವಲ ಶ್ರೀಮಂತರ ಪರ, ಬಡವರ ವಿರೋಧಿ ಎಂದು ಟೀಕಿಸುವವರಿಗೆ ಈ ದಿಟ್ಟ ಕ್ರಮವೇ ಉತ್ತರವಾಗಿದೆ ಎಂದರು.ಈ ತೆರಿಗೆ ಸುಧಾರಣೆಯಿಂದ ತೆರಿಗೆ ಸಂಗ್ರಹದ ಮೊತ್ತ ಮೊದಲಿಗಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚಳವಾಗಲಿದೆ. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಮೇಲೆ ರಾಜ್ಯ ಹೇರುವ ತೆರಿಗೆಯನ್ನು ರಾಜ್ಯ ಸರ್ಕಾರ ಕಡಿಮೆ ಮಾಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಜಿಲ್ಲಾ ಪ್ರಮುಖ ಉಮೇಶ ಭಾಗ್ವತ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮಾಧ್ಯಮ ಸಂಚಾಲಕ ಕೆ.ಟಿ.ಹೆಗಡೆ, ರವಿ ದೇವಡಿಗ ಇದ್ದರು.