ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಜನ ಸಾಮಾನ್ಯರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಜಿಎಸ್‌ಟಿ ತೆರಿಗೆ ಸರಳೀಕರಣ ಮಾಡುವ ಮೂಲಕ ಎಲ್ಲಾ ವರ್ಗದ ಜನರ ಹಿತವನ್ನು ಕಾಪಾಡುವ ಜೊತೆಗೆ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದರು.ನಗರದ ದೊಡ್ಡಪೇಟೆಯಲ್ಲಿ ಮಂಗಳವಾರ ನಡೆದ ಜಿಎಸ್‌ಟಿ ಉಳಿಕೆ ಉತ್ಸವ ಮತ್ತು ಸ್ವದೇಶಿ ಕ್ಯಾಂಪೇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ವಿವಿಧ ಅಂಗಡಿ ಮಳಿಗೆಗಳಿಗೆ ತೆರಳಿ ಮಾಲೀಕರು ಹಾಗೂ ವ್ಯಾಪಾರಸ್ಥರ ಬಳಿ ಜಿಎಸ್‌ಟಿ 2.0ರಿಂದ ಆಗುತ್ತಿರುವ ಅನುಕೂಲದ ಬಗ್ಗೆ ತಿಳಿದುಕೊಂಡರು.
ಪ್ರಧಾನಮಂತ್ರಿ ರಾಷ್ಟ್ರದ ಅಭಿವೃದ್ಧಿಯನ್ನು ವಿಶ್ವಕ್ಕೆ ಪಸರಿಸಿದ್ದು ಆ.15ರಂದು ದೇಶವಾಸಿಗಳಿಗೆ ದೀಪಾವಳಿ, ದಸರಾ ಮಧ್ಯದಲ್ಲಿ ಜನಸಾಮಾನ್ಯರಿಗೆ, ಬಡವರಿಗೆ ಕೊಡುಗೆ ನೀಡುತ್ತೇವೆಂದು ಹೇಳಿದ್ದರು ಅದರಂತೆ ಸುಮಾರು 393 ವಿವಿಧ ಸಾಮಗ್ರಿಗಳ ಬೆಲೆ ಕಡಿಮೆಯಾಗುವಂತೆ ಜಿಎಸ್ಟಿ ಇಳಿಸಿದ್ದಾರೆ. ದೇಶಕ್ಕೆ ಒಂದು ಹೊಸ ಆರ್ಥಿಕತೆ ನೀಡುವುದರ ಮೂಲಕ ಸಾಮಾನ್ಯ ವರ್ಗದ ಜನರೂ ಚೆನ್ನಾಗಿ ಬದುಕು ಸಾಗಿಸಲು ಅನುವು ಮಾಡಿಕೊಡಲಾಗಿದೆ. ಜಿಎಸ್‌ಟಿ ಎಂದರೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಅಲ್ಲ, ಗೂಡ್ಸ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ ಎಂದು ಅರ್ಥ ನೀಡಿದ್ದಾರೆ. ಟೆಕ್ಸ್‌ಟೈಲ್ಸ್, ಆಹಾರ ಪದಾರ್ಥಗಳು, ಆಟೊಮೊಬೈಲ್ ಇಂಡಸ್ಟ್ರಿ, ಔಷಧಗಳು, ಕೃಷಿ ಉಪಕರಣಗಳು, ರಸಗೊಬ್ಬರ, ಹೆಲ್ತ್‌ಸೆಕ್ಟರ್, ಶಿಕ್ಷಣ ಕ್ಷೇತ್ರ, ಕೃಷಿ ವಲಯ, ಕ್ರೀಡಾವಲಯ, ಕಟ್ಟಡ ನಿರ್ಮಾಣ ಕ್ಷೇತ್ರ ಇವೆಲ್ಲವೂ ನೂತನ ಜಿಎಸ್‌ಟಿ ಸರಳೀಕರಣದ ಪ್ರಯೋಜನ ಪಡೆದು ದೇಶದ ಆರ್ಥಿಕತೆ ಇನ್ನಷ್ಟು ವೃದ್ಧಿಯಾಗಲಿದೆ. ಎಲ್ಲರಿಗೂ ಎಲ್ಲಾ ವಸ್ತುಗಳು ಕೈಗೆಟಕುವಂತೆ ಮಾಡಿದ್ದು ದೇಶಕ್ಕಾಗಿ ಮೋದಿಯವರು ಕೊಟ್ಟಿರುವ ಕೊಡುಗೆಯನ್ನು ಜನಸಾಮಾನ್ಯರು ಒಪ್ಪಿಕೊಂಡಿದ್ದು ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರಲು ಇದೊಂದು ಮೈಲಿಗಲ್ಲಾಗಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ನಂಜಾಮರಿ ಮಾತನಾಡಿ, ಕೇಂದ್ರದ ಬೆಂಬಲ ಬೆಲೆ ಒಂದು ಕ್ವಿಂಟಾಲ್ ಕೊಬ್ಬರಿಗೆ ರು. 12500 ಇದ್ದು ಇದನ್ನು 15 ಸಾವಿರಕ್ಕೆ ಹೆಚ್ಚಳ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಈ ಬಗ್ಗೆ ಕೇಂದ್ರದಲ್ಲಿ ಚರ್ಚಿಸುವಂತೆ ಹಾಗೂ ತಿಪಟೂರು ಜಿಲ್ಲಾ ಕೇಂದ್ರವಾಗಲು ನಡೆಸಿರುವ ಹೋರಾಟಕ್ಕೆ ಸಹಕರಿಸಬೇಕು ಎಂದು ಸಚಿವ ವಿ. ಸೋಮಣ್ಣರಿಗೆ ಮನವಿ ಮಾಡಿದರು. ಈ ವೇಳೆ ಬಿಜೆಪಿ ಮುಖಂಡರಾದ ವಿಶ್ವದೀಪ್, ಲಿಂಗರಾಜು, ತರಕಾರಿ ಗಂಗಾಧರ್, ಆಯರಹಳ್ಳಿ ಶಂಕರಪ್ಪ, ಬಿಸಲೇಹಳ್ಳಿ ಜಗದೀಶ್, ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು, ನಗರಸಭಾ ಸದಸ್ಯರುಗಳು ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.