ಸಾರಾಂಶ
ಜಿಟಿಜಿಟಿ ಮಳೆಯಲ್ಲಿ ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ.
ಶಿರಸಿ: ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಗೌರಿ-ಗಣೇಶ ಹಬ್ಬವನ್ನು ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಜಿಟಿಜಿಟಿ ಮಳೆಯಲ್ಲಿ ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ.
ನಗರ ಹಾಗೂ ಗ್ರಾಮೀಣ ಭಾಗಗಗಳಲ್ಲಿ ಮಂಗಳವಾರ ಗೌರಿ ಪ್ರತಿಷ್ಠಾಪಿಸಲಾಗಿದ್ದು, ಇಂದು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದರಿಂದ ಹೂವು, ಹಣ್ಣುಗಳ ಖರೀದಿಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಬಂದು ದರ ಏರಿಕೆ ನಡುವೆಯೂ ಖರೀದಿಸಲು ಮುಂದಾಗಿರುವುದರಿಂದ ನಗರದ ಶಿವಾಜಿ ಚೌಕ, ಅಂಚೆ ಕಚೇರಿ ವೃತ್ತ, ದೇವಿಕೆರೆ, ಸಿ.ಪಿ. ಬಝಾರ್, ನಟರಾಜ ರಸ್ತೆ, ಬನವಾಸಿ ರಸ್ತೆಗಳಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಸಿದ್ದಾರೆ. ಇದರಿಂದ ನಗರದ ಕೆಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕೆಲ ಸಮಯ ಪರದಾಡುವಂತಾಯಿತು.ಕಳೆದ ಬಾರಿಯ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಹೂವು, ಹಣ್ಣುಗಳ ಬೆಲೆಗಳು ಗಗನಕ್ಕೇರಿವೆ. ಸೇವಂತಿಗೆ ಪ್ರತಿ ಕೆಜಿಗೆ ₹೪೫೦ನಿಂದ ₹೫೦೦, ಸೇವಂತಿಗೆ ಹೂವು ಮಾರಿಗೆ ₹100-150ವರೆಗೆ ಹಾಗೂ ಮೊಳಕ್ಕೆ ₹50ರಂತೆ ಮಾರಾಟವಾಗುತ್ತಿದೆ. ಚೆಂಡು ಹೂವಿನ ಮಾಲೆಗೆ ₹200 ದರವಿದೆ. ಜಾಜಿ ಮಲ್ಲಿಗೆ ಹೂವಿನ ಮಾರಿಗೆ ₹200ನಿಂದ ₹250 ವರೆಗೆ ಮಾರಾಟವಾಗುತ್ತಿದೆ.
ಪ್ರತಿ ಮಂಗಳವಾರ ಶಿರಸಿಯಲ್ಲಿ ವಾರದ ಸಂತೆ ನಡೆಯುತ್ತದೆ. ಹಬ್ಬದ ಸಂತೆಯಾದ್ದರಿಂದ ತರಕಾರಿ-ಹಣ್ಣುಗಳು ದುಬಾರಿ ಇವೆ. ಏಲಕ್ಕಿ ಬಾಳೆ ಕೆಜಿಗೆ ₹120ಗೆ ಮಾರಾಟವಾಗುತ್ತಿದೆ. ಸೇಬು ಪ್ರತಿ ಕೆಜಿಗೆ ₹200-240ವರೆಗೆ ದರ ಇದೆ. ದಾಳಿಂಬೆ ಕೆಜಿಗೆ ₹240, ಮೊಸಂಬಿಗೆ ₹90 ದರ ಇದೆ. ಹಬ್ಬ ಇರುವುದರಿಂದ ಗ್ರಾಹಕರು ಹೆಚ್ಚಿನ ಹಣ ಕೊಟ್ಟೇ ಖರೀದಿ ಮಾಡುತ್ತಿದ್ದಾರೆ.