ಸಾರಾಂಶ
ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ, ಇದಕ್ಕೆ ಅಗತ್ಯವಿರುವ ಹಣ ಈಗಾಗಲೇ ಕಾಯ್ದಿರಿಸಲಾಗಿದೆ
ರೋಣ: ಗ್ರಾಮೀಣ ಭಾಗದ ಬಡ ಮಕ್ಕಳ ತಾಂತ್ರಿಕ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ₹50 ಕೋಟಿ ಅನುದಾನದಲ್ಲಿ ರೋಣದಲ್ಲಿ ಜಿಟಿಟಿಸಿ ಕಾಲೇಜು ಮಂಜೂರು ಮಾಡಿದ್ದು. ಶೀಘ್ರ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿದ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯ ಸರ್ಕಾರ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಯುವಕರಿಗೆ ನೆರವಾಗುವಂತೆ ಜಿಟಿಟಿಸಿ ಕಾಲೇಜು ನಿರ್ಮಾಣಕ್ಕೆ ₹ 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರ ಕಾಲೇಜು ಆರಂಭವಾಗಲಿದೆ. ಐಟಿಐ, ಪಿಯುಸಿ, ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಜೆಟಿಟಿಸಿ ತರಬೇತಿ ಕೇಂದ್ರ ನೆರವಾಗುವುದು. ಇದರ ಪ್ರಯೋಜನ ಗ್ರಾಮೀಣ ಭಾಗದ ಎಲ್ಲ ವರ್ಗದ ಜನರು ಪಡೆದುಕೊಳ್ಳಬೇಕು ಎಂದರು.
ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ, ಇದಕ್ಕೆ ಅಗತ್ಯವಿರುವ ಹಣ ಈಗಾಗಲೇ ಕಾಯ್ದಿರಿಸಲಾಗಿದೆ.ಈ ಪಂಚ ಯೋಜನೆಗಳ ಫಲಾನುಭವಿಗಳು ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಭರವಸೆ ಇಡಬೇಕು ಎಂದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ನಾಗರಾಜ.ಕೆ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮನೋಭಾವನೆ, ಏಕತೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಉತ್ತಮ ಸಂಸ್ಕಾರ ಬೆಳೆಸುವದು ಅತೀ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಮಂಜುಳ ಹಕಾರಿ, ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ, ದುರ್ಗಪ್ಪ ಹಿರೇಮನಿ, ಲೋಕೋಪಯೋಗಿ ಎಇಇ ಬಲವಂತ ನಾಯಕ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ತಾಲೂಕ ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ, ಪಿಎಸ್ಐ ಪ್ರಕಾಶ ಬಣಕಾರ, ಉಪ ತಹಸೀಲ್ದಾರ್ ಜಿ.ಟಿ. ಕೊಪ್ಪದ, ಅಶೋಕ ದೇಶಣ್ಣವರ, ಸಂಗಪ್ಪ ಜಿಡ್ಡಿಬಾಗೀಲ, ದಾವಲಸಾಬ್ ಬಾಡಿನ, ಹನಮಂತಪ್ಪ, ಸಿ.ಎಸ್. ನೀಲಗುಂದ ಮುಂತಾದವರು ಉಪಸ್ಥಿತರಿದ್ದರು. ಬಿಇಒ ರುದ್ರಪ್ಪ ಹುರಳಿ ಸ್ವಾಗತಿಸಿದರು.