ಚಳ್ಳಕೆರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಜಯಗಳಿಸಿ ಇದೀಗ ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಟಿ. ರಘುಮೂರ್ತಿ ಅವರು ಸಚಿವರಾದ ನಂತರ ಮೊದಲ ಬಾರಿಗೆ ಕ್ಷೇತ್ರದ ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಜಯಗಳಿಸಿ ಇದೀಗ ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಟಿ. ರಘುಮೂರ್ತಿ ಅವರು ಸಚಿವರಾದ ನಂತರ ಮೊದಲ ಬಾರಿಗೆ ಕ್ಷೇತ್ರದ ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದರು.

ಶಾಸಕರಾದ ಮೊದಲ ಅವಧಿಯಲ್ಲಿ 2013ರಲ್ಲಿ ಜನತಾ ದರ್ಶನ ಮಾಡುವ ಮೂಲಕ ಪ್ರತೀ ಗ್ರಾಮಕ್ಕೆ ತಾಲೂಕು ಆಡಳಿತವನ್ನು ಕರೆದೊಯ್ದು ಜನರ ಬಳಿ ಅಹವಾಲು ಕೇಳುವ ಕೆಲಸ ಮಾಡುತ್ತಿದ್ದರು. ಈ ಕಾರ್ಯಕ್ರಮ ತಾಲೂಕಿನಾದ್ಯಂತ ಜನಮನ್ನಣೆ ಗಳಿಸಿತ್ತು.

ಸಚಿವರಾದ ಬಳಿಕ ಜನರ ಅಹವಾಲು ಸ್ವೀಕರಿಸುವ ಕೆಲಸಕ್ಕೆ ಚಾಲನೆ ನೀಡಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳ ಮುಂದೆ ಬಂದು ಬೇಡಿಕೆಗಳ ಸಲ್ಲಿಸಿದರು.

ಚಳ್ಳಕೆರೆ ನಗರದ ಹೊರವಲಯದಲ್ಲಿ ಇರುವ ಜಿಟಿಟಿಸಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ, ತಾಂತ್ರಿಕ ತರಬೇತಿ, ಹಾಗೂ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಸಚಿವರಿಗೆ ಅಹವಾಲು ಸಲ್ಲಿಸಿದರು.

ನಾವು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದು ಉತ್ತಮ ತಾಂತ್ರಿಕ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶದಿಂದ ಜಿಟಿಟಿಸಿ ಕಾಲೇಜಿಗೆ ಸೇರಿದ್ದೇವೆ. ಆದರೆ ಪ್ರಸ್ತುತ ಕಾಲೇಜಿನಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸಮರ್ಪಕ ಬೋಧನೆ, ಲ್ಯಾಬ್ ತರಬೇತಿ, ವರ್ಕ್ ಶಾಪ್ ತರಬೇತಿ ಹಾಗೂ ವಿದ್ಯಾರ್ಥಿಗಳ ಮೂಲ ಸೌಲಭ್ಯಗಳ ವಿಷಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡರು.

ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಹಾಗೂ ಸಮವಸ್ತ್ರ, ಪುಸ್ತಕ, ಐ.ಡಿ.ಕಾರ್ಡ ಸೇರಿದಂತೆ ಇತರೆ ಸಾಮಗ್ರಿಗಳಿಗೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. 500ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯ ಇಲ್ಲ. ಇದನ್ನೆಲ್ಲಾ ಪ್ರಶ್ನಿಸಿದರೆ ಗೂಂಡಾಗಿರಿ ಮಾಡುತ್ತೀರಾ? ನಿಮ್ಮನ್ನು ಇಲ್ಲಿಂದ ಹೊರ ಹಾಕುತ್ತೇವೆ ಎಂದು ಬೆದರಿಸುವ ಮಟ್ಟಕ್ಕೆ ಬಂದಿದ್ದಾರೆ. ಪ್ರತಿಯೊಂದು ಪರಿಕರಗಳನ್ನು ನೀಡುವಾಗ ಒಂದಕ್ಕೆ ಎರಡು ಪಟ್ಟು ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂದು ದೂರುಗಳ ಸುರಿಮಳೆಗೖದರು.

ತೋಡ್ಲಾರಹಟ್ಟಿ ಗ್ರಾಮದ ಜನರು ಅಧಿಕ ಸಂಖ್ಯೆ ಯಲ್ಲಿರುವ ನಾಯಕ ಸಮುದಾಯದ ಆರಾಧ್ಯ ದೇವರಾಗಿರುವ ಗಾದ್ರಿಪಾಲಕನ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಳೆ ಸಮೀಕ್ಷೆದಾರರು ಬೆಳೆ ವೀಕ್ಷಣೆಗೆ ಹೋದಾಗ ವಿಷಜಂತುಗಳಿಂದ ರಕ್ಷಣೆ ಪಡೆಯಲು ಪರಿಕರಗಳ ವಿತರಣೆ, ಗುರುತಿನ ಚೀಟಿ, ಅಪಘಾತ ವಿಮೆ, ಜೀವಕ್ಕೆ ಹಾನಿಯಾದರೆ ವಿಮೆಯಂತಹ ಸೌಲಭ್ಯ ಕಲ್ಪಿಸುವುದು ಸೇರಿದಂತೆ ದಿನಭತ್ಯೆಯನ್ನೂ ಕೊಡಿಸಬೇಕೆಂದು ಸಮೀಕ್ಷೆದಾರರ ಸಂಘದ ವತಿಯಿಂದ ಸಚಿವರ ಗಮನ ಸೆಳೆದರು.

ಅಭಿನಂದನೆ ಮಹಾಪೂರ: ನೂತನ ಸಚಿವರಾಗಿರುವ ಟಿ. ರಘುಮೂರ್ತಿ ಅವರಿಗೆ ವಿವಿಧ ಹಂತದ ಮುಖಂಡರು, ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ನೌಕರರ ಸಂಘ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.

ಬಾಕ್ಸ್‌...

ಮಗನ ನಾಮಕರಣಕ್ಕೆ ಸಹಾಯ ಮಾಡಿ!

ಮಗನ ನಾಮಕರಣಕ್ಕೆ ಸಹಾಯ ಮಾಡಿ ಎಂದು ಸಚಿವರಿಗೆ ಮನವಿ ಮಾಡಿದ್ದು ಸೇರಿದಂತೆ ಈರುಳ್ಳಿ ಬೆಳೆ ನಷ್ಟವಾಗಿದೆ ಎಂದು ಹೇಳಿಕೊಂಡು ಬಂದ ಅನ್ನದಾತನ ಅಹವಾಲು ಕೇಳಿಸಿಕೊಂಡ ಸಚಿವರು ಅರ್ಜಿಗಳ ಪರಿಶೀಲನೆಗೆ ಶಾಸಕರ ಭವನದ ಸಿಬ್ಬಂದಿಗೆ ಸೂಚಿಸಿದರು.

ಪೋಟೋ:

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶನಿವಾರ ಸಚಿವ ಟಿ.ರಘುಮೂರ್ತಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.