- ಪರಿಷ್ಕರಣೆ ಆಗುತ್ತಿರುವುದು ಸಮಿತಿಯಿಂದಲೇ ಹೊರತು ಅಧಿಕಾರಿಗಳು ಪತ್ತೆ ಮಾಡಿದ್ದರಿಂದ ಅಲ್ಲ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೃತ ಫಲಾನುಭವಿಗಳ ಖಾತೆಗೆ ಹಣ ಜಮಾ ಆದ ಬಗ್ಗೆ ಸೆಪ್ಟಂಬರ್‌ 31ರಂದೇ ನಮಗೆ ಗೊತ್ತಾಗಿದ್ದು, ತಕ್ಷಣ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದೆವು. ಇದನ್ನು ಪತ್ತೆ ಮಾಡಿದ್ದು ಅಧಿಕಾರಿಗಳಲ್ಲ, ಗ್ಯಾರಂಟಿ ಸಮಿತಿಯವರು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಫಲಾನುಭವಿಗಳ ಖಾತೆಗೆ ಹಣ ಜಮಾ ಆದ ಬಗ್ಗೆ ಅಕ್ಟೋಬರ್‌ನಲ್ಲೇ ನಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಗಲೇ ಪತ್ರ ಬರೆದಿದ್ದೆವು. ಅಕ್ಟೋಬರ್ 2025ರಿಂದ ಮೃತ ಫಲಾನುಭವಿಗಳ ಮಾಹಿತಿ ಕಲೆ ಹಾಕಲು ಶುರುಮಾಡಿದೆವು. 1,46,056 ಫಲಾನುಭವಿಗಳು ಮೃತಪಟ್ಟ ಮಾಹಿತಿ ಸಿಗುತ್ತದೆ. ತಕ್ಷಣ ಕಾರ್ಯ ಪ್ರವೃತ್ತರಾಗಿ, ಮೃತರ ಖಾತೆಗೆ ಹಣ ಜಮಾ ಆಗದಂತೆ ತಡೆದೆವು. 68,776 ಮೃತ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದ್ದು ಗೊತ್ತಾಗುತ್ತದೆ. ಒಟ್ಟು ₹79.75 ಕೋಟಿ ಜಮಾ ಆಗಿದ್ದು, ಅದನ್ನು ವಾಪಸ್‌ ಪಡೆಯಲು ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಹೊರ ರಾಜ್ಯಗಳ ಬ್ಯಾಂಕ್‌ಗಳಿಂದಾಗಿ ವಿಳಂಬವಾಗುತ್ತಿದೆ. ಪರಿಷ್ಕರಣೆಯ ವಿಷಯ ಹೇಳಿದ ನಂತರ ಇದು ಬಂದಿದ್ದಲ್ಲ. ವಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ. ಅರ್ಹ ಫಲಾನುಭವಿಗಳು ಯಾವುದೇ ಆತಂಕಪಡಬೇಕಾಗಿಲ್ಲ. ವಿಪಕ್ಷದವರು ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿಗೆ ತಂದು, ನಿಲ್ಲಿಸಿದ್ದಾರೆ. ನಾಳೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಯಾವ ರೀತಿ ಪರಿಷ್ಕರಣೆ ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಸಭೆ ಬಳಿಕ ನಿರ್ಧಾರವಾದ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.


ಗ್ರಾಪಂ ಪಿಡಿಒ, ಆಶಾ ಕಾರ್ಯಕರ್ತೆಯರು ಸೇರಿದಂತೆ ಒಂದು ಸಮಿತಿ ಮಾಡಿ, ಸರ್ವೇ ಮಾಡುತ್ತಿದ್ದೇವೆ. ಗ್ಯಾರಂಟಿ ಸಿಗುತ್ತದೆಂದಾಗ ಅರ್ಜಿ ಹಾಕುವುದಕ್ಕೆ ಏನು ತೊಂದರೆ? ರಾಜಕೀಯ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡಬೇಕಾ, ಬೇಡವಾ ಎಂಬ ಬಗ್ಗೆ ಚರ್ಚೆಯಾಯಿತು. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನೇನಾದರು ನಾವು ನಿಲ್ಲಿಸಿದ್ದೇವಾ? ಯಾಕೆ ಕಾಮೆಂಟ್ ಮಾಡುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಅವರು ಹರಿಹಾಯ್ದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ₹5 ಸಾವಿರ ಕೋಟಿ ಹಗರಣ ಅಂತೆಲ್ಲಾ ಆರೋಪ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಹಗರಣವೇ ಆಗಿಲ್ಲ. ಖಜಾನೆಯಿಂದ ಹಣವೂ ಬಿಡುಗಡೆಯಾಗಿಲ್ಲ. ಅದು ಹಗರಣವಲ್ಲ, 2 ತಿಂಗಳ ದುಡ್ಡೇ ಇನ್ನೂ ಬಿಡುಗಡೆಯಾಗಿಲ್ಲ. ಈವರೆಗೆ ₹1.30 ಲಕ್ಷ ಕೋಟಿ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾವಣೆಯಾಗಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲು. ರಾಜ್ಯದ ತಲಾ ಆದಾಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 670 ಕೋಟಿ ಜನರು ಶಕ್ತಿ ಯೋಜನೆ ಮೂಲಕ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಎಚ್.ಎಂ. ರೇವಣ್ಣ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

- - -

(ಫೋಟೋ: ಎಚ್‌.ಎಂ. ರೇವಣ್ಣ)