ಸಾರಾಂಶ
ವಿಧಾನಸಭೆ : ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರದಿಂದ ವೇತನ ನೀಡುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಆರಂಭಿಸಿದ ಧರಣಿಗೆ ಬುಧವಾರದ ಕಲಾಪ ಮಧ್ಯಾಹ್ನದವರೆಗೆ ಬಲಿಯಾಯಿತು.
ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ಧಾವಿಸಿ ಧರಣಿ ನಡೆಸಿ, ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಹೀಗಾಗಿ, ಸಭಾಧ್ಯಕ್ಷ ಯು.ಟಿ.ಖಾದರ್ ಮಧ್ಯಾಹ್ನ 1.45ಕ್ಕೆ ಕಲಾಪ ಮುಂದೂಡಿದರು. ಮಧ್ಯಾಹ್ನ ಕಲಾಪ ಆರಂಭಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿವೇಶನ ಮುಗಿಯುತ್ತಿದ್ದಂತೆ ಈ ಬಗ್ಗೆ ಸಭೆ ಕರೆದು ತಕರಾರುಗಳನ್ನು ಪರಿಹರಿಸಲಾಗುವುದು. ಶಾಸಕರ ಘನತೆಗೆ ಕುಂದುಂಟು ಮಾಡುವುದಿಲ್ಲ ಎಂದು ಅಶ್ವಾಸನೆ ನೀಡಿದರು. ಸಿಎಂ ಭರವಸೆಗೆ ಸಹಮತ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಹಿಂಪಡೆದು ಕಲಾಪದಲ್ಲಿ ಭಾಗಿಯಾದರು.
ಬುಧವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿಯನ್ನು ಮುಂದುವರಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು. ಸಭಾಧ್ಯಕ್ಷ ಯು.ಟಿ.ಖಾದರ್, ಧರಣಿ ವಾಪಸ್ ಪಡೆದು ಕಲಾಪ ನಡೆಯಲು ಅವಕಾಶ ಮಾಡಿಕೊಡಿ, ಸರ್ಕಾರ ಈಗಾಗಲೇ ಉತ್ತರ ನೀಡಿದೆ. ಸದಸ್ಯರು ಸಹಕರಿಸಿ ಎಂದು ಮನವಿ ಮಾಡಿದರು. ಆದರೂ ಪ್ರತಿಪಕ್ಷ ಸದಸ್ಯರು ಧರಣಿಯನ್ನು ಹಿಂಪಡೆಯಲು ನಿರಾಕರಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸದನ ನಡೆಯಬೇಕೆಂಬುದು ನಮ ಉದ್ದೇಶ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಸರ್ಕಾರದ ಖಜಾನೆಯಿಂದ ಹಣ ನೀಡುವುದಕ್ಕೆ ವಿರೋಧವಿದೆ. ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದು, ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಅಂಗನವಾಡಿ ಕಾರ್ಯಕರ್ತರಿಗೆ, ಅತಿಥಿ ಉಪನ್ಯಾಸಕರಿಗೆ ಗೌರವಧನ ಸಕಾಲಕ್ಕೆ ನೀಡಲಾಗುತ್ತಿಲ್ಲ ಎಂದು ಟೀಕಿಸಿದರು.
ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ವೇತನ ನೀಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಶಾಸಕರನ್ನು ಅವಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರನ್ನು ಸರ್ಕಾರಿ ಗ್ಯಾರಂಟಿ ಸಮಿತಿಗೆ ನೇಮಕ ಮಾಡಿ, ವೇತನ ನೀಡುತ್ತಿರುವುದು ಕಾನೂನುಬಾಹಿರ. ಇದಕ್ಕೆ ನಮ್ಮ ಆಕ್ಷೇಪಣೆಯೇ ಹೊರತು, ಸದನ ನಿಲ್ಲಿಸುವುದಕ್ಕಲ್ಲ ಎಂದು ಹೇಳಿದರು.
ಬಿಜೆಪಿ ಸದಸ್ಯ ವಿ.ಸುನೀಲ್‌ಕುಮಾರ್ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರು, ಸದಸ್ಯರಿಗೆ ಜನರ ತೆರಿಗೆ ಹಣವನ್ನು ಏಕೆ ನೀಡಲಾಗುತ್ತಿದೆ. ತಹಶೀಲ್ದಾರ್ ಮತ್ತು ಕಾರ್ಯ ನಿರ್ವಹಣಾಧಿಕಾರಿಗಳ ವೇತನ ಕಡಿತ ಮಾಡಿಕೊಡಿ, ನಾವು ಬೇಡ ಎನ್ನುವುದಿಲ್ಲ ಎಂದರು.
ಬಾವಿಯಲ್ಲಿ ಧರಣಿ ಮುಂದುವರಿದ ಕಾರಣ ಪರಿಸ್ಥಿತಿ ತಹಬಂದಿಗೆ ಬಾರದಿದ್ದನ್ನು ಗಮನಿಸಿದ ಸಭಾಧ್ಯಕ್ಷರು ಸುಗಮ ಕಲಾಪ ನಡೆಸಲು ಆಗುವುದಿಲ್ಲ ಎಂಬುದನ್ನು ಮನಗಂಡು ಸದನದ ಕಾರ್ಯಕಲಾಪವನ್ನು ಮಧ್ಯಾಹ್ನ 1.45ಕ್ಕೆ ಮುಂದೂಡಿದರು. ಮಧ್ಯಾಹ್ನ ಕಲಾಪ ಸೇರಿದಾಗ ಮುಖ್ಯಮಂತ್ರಿಗಳು ಉತ್ತರ ನೀಡಿ, ಅಧಿವೇಶನ ಬಳಿಕ ತಕರಾರನ್ನು ಸರಿಪಡಿಸುವ ಬಗ್ಗೆ ವಿಶ್ವಾಸ ನೀಡಿದರು. ಬಳಿಕ, ಧರಣಿಯನ್ನು ಕೈಬಿಡಲಾಯಿತು. ಬಳಿಕ, ಕಲಾಪ ಸುಗಮವಾಗಿ ನಡೆಯಿತು.