ರಾಜ್ಯದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಪಂಚ ಗ್ಯಾರಂಟಿಗಳ ಅನುಷ್ಠಾನ ಆಗಿದ್ದು, ಅವುಗಳ ಕುರಿತ ಮಾಹಿತಿ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ ಫೆ. 11ರಂದು ಹೊನ್ನಾವರದ ಗುಣವಂತೆಯಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ರಾಜ್ಯದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಪಂಚ ಗ್ಯಾರಂಟಿಗಳ ಅನುಷ್ಠಾನ ಆಗಿದ್ದು, ಅವುಗಳ ಕುರಿತ ಮಾಹಿತಿ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ ಫೆ. 11ರಂದು ಹೊನ್ನಾವರದ ಗುಣವಂತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಾಂಡುರಂಗ ನಾಯ್ಕ ತಿಳಿಸಿದ್ದಾರೆ.

ನಗರದ ತಾಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾ ಆಡಳಿತ, ಜಿಪಂ ಸಹಕಾರದಲ್ಲಿ ಅಂದು ಬೆಳಗ್ಗೆ 11ರಿಂದ ಗುಣವಂತೆ ಕೆಳಗಿನೂರು ಒಕ್ಕಲಿಗ ಸಮಯದಾಯ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸಚಿವ ಮಂಕಾಳು ವೈದ್ಯ ಚಾಲನೆ ನೀಡಲಿದ್ದು, ಸಭಾಪತಿ ಬಸವರಾಜ್ ಹೊರಟ್ಟಿ, ರಾಜ್ಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷ ಎಸ್.ಆರ್. ಪಾಟೀಲ ಬ್ಯಾಡಗಿ,‌ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್.ವಿ. ದೇಶಪಾಂಡೆ, ಸತೀಶ ಸೈಲ್, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಭೀಮಣ್ಣ‌ ನಾಯ್ಕ ಇತರರು ಭಾಗವಹಿಸಲಿದ್ದಾರೆ ಎಂದರು.

ಗ್ಯಾರಂಟಿ ಜಾಗೃತಿ, ಮಾಹಿತಿ, ಅದರ ಪರಿಣಾಮದ‌ ಕುರಿತು ನಾಟಕ, ರೂಪಕ, ಯಕ್ಷಗಾನ ಪ್ರದರ್ಶನ ಕೂಡ ನಡೆಯಲಿದೆ. ಇದೊಂದು ಸಂಭ್ರಮ ಮಾದರಿಯಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಶಕ್ತಿ ಯೋಜನೆಯಿಂದ 11.3 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದು ₹450 ಕೋಟಿ ಸರ್ಕಾರ ಭರಣ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 53,000 ಕ್ವಿಂಟಲ್ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಯುವನಿಧಿ ಅಡಿ ಒಟ್ಟು 6,571 ಅರ್ಹ ಫಲಾನುಭವಿಗಳು ಯುವನಿಧಿ ಯೋಜನೆ ಅಡಿ ಪ್ರಯೋಜನ ಪಡೆಯುತ್ತಿದ್ದು ಇಲ್ಲಿಯವರೆಗೆ ₹17.81 ಕೋಟಿಗಳನ್ನು ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ ಎಂದರು.

ಇನ್ನು ಗೃಹಲಕ್ಷ್ಮಿ ಯೋಜನೆಯ ಜಿಲ್ಲೆಯಲ್ಲಿ 3.36 ಲಕ್ಷ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆ ಅಡಿ 3.95,462 ಸ್ಥಾವರಗಳು ನೊಂದಣಿಯಾಗಿದ್ದು ಇಲ್ಲಿಯವರೆಗೆ ₹511 ಕೋಟಿಗಳನ್ನು ಸರ್ಕಾರ ಭರಣ ಮಾಡಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ನಾಗರಾಜ‌ ಮುರ್ಡೇಶ್ವರ, ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಮತ್ತಿತರರು ಇದ್ದರು.