ಸಾರಾಂಶ
ನರಸಿಂಹರಾಜಪುರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಶುಕ್ರವಾರ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಸರ್ಕಾರ ಬಡವರಿಗೆ ನೀಡುವ ಅಕ್ಕಿ ಮಾರಾಟ ಮಾಡಿದರೆ ಕಾರ್ಡು ರದ್ದು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಶುಕ್ರವಾರ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೆಟ್ಟಿಕೊಪ್ಪದ ಲ್ಯಾಂಪ್ ಸೊಸೈಟಿ, ಎನ್.ಆರ್.ಪುರ ಪಟ್ಟಣದಲ್ಲಿರುವ ಹಳ್ಳಿ ಸೊಸೈಟಿ, ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, ಹಂತುವಾನಿಯ ನ್ಯಾಯ ಬೆಲೆ ಅಂಗಡಿ, ಬಿ.ಎಚ್.ಕೈಮರದ ಸೀತೂರು ಸೊಸೈಟಿಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಘು, ಬೇಸಿಲ್, ಜಯರಾಂ, ಸಂದೀಪ್, ನಿತ್ಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈಗಾಗಲೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರ ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲು ಆದೇಶ ಮಾಡಿದೆ. ಈ ಹಿಂದೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಹಣ ನೀಡಲಾಗುತ್ತಿತ್ತು. ಈಗ 5 ಕೆ.ಜಿ ಅಕ್ಕಿಯ ಹಣದ ಬದಲಿದೆ 5 ಕೆಜಿ.ಅಕ್ಕಿಯೇ ನೀಡಲಾಗುತ್ತಿದೆ.ಅಲ್ಲದೆ ಫೆಬ್ರವರಿ ತಿಂಗಳ 5 ಕೆ.ಜಿ.ಅಕ್ಕಿ ಸೇರಿಸಿ ಈ ತಿಂಗಳಲ್ಲಿ ಕುಟುಂಭದ ಒಬ್ಬ ಸದಸ್ಯರಿಗೆ 15 ಕೆ.ಜಿ.ಅಕ್ಕಿ ನೀಡಲಾಗುತ್ತಿದೆ.ಮುಂದಿನ ತಿಂಗಳಲ್ಲಿ ಮಾತ್ರ ಒಬ್ಬ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಮಾತ್ರ ನೀಡಲಾಗುತ್ತದೆ. ಇದನ್ನು ನ್ಯಾಯ ಬೆಲೆ ಅಂಗಡಿಯವರು ಬಿಪಿಎಲ್ ಕಾರ್ಡುದಾರರಿಗೆ ಮನವರಿಕೆ ಮಾಡಬೇಕು ಎಂದು ಸಮಿತಿ ಸದಸ್ಯರು ನ್ಯಾಯ ಬೆಲೆ ಅಂಗಡಿಯವರಿಗೆ ಸೂಚಿಸಿದರು.
ಸರ್ಕಾರ ಬಡವರಿಗೆ ನೀಡುವ ಅಕ್ಕಿ ಮಾರಾಟ ಮಾಡಿದರೆ ಕಾರ್ಡು ರದ್ದು ಪಡಿಸಲಾಗುವುದು ಎಂಬ ಸೂಚನಾ ಫಲಕವನ್ನು ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲೂ ಹಾಕಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಯಿತು. ಈ ಹಿಂದೆ ಅಕ್ಕಿ ನೀಡು ವುದಕ್ಕೆ ಕಾಲಾವದಿ ನಿಗದಿ ಮಾಡಲಾಗಿತ್ತು. ಈಗ ತಿಂಗಳ ಕೊನೆಯವರೆಗೂ ಅಕ್ಕಿ ನೀಡಲಾಗುತ್ತದೆ ಎಂದು ಗ್ಯಾರಂಟಿ ಸಮಿತಿ ಸದಸ್ಯರುಗಳಾದ ರಘು, ಬೇಸಿಲ್ ನ್ಯಾಯಬೆಲೆ ಅಂಗಡಿಗೆ ಆಗಮಿಸಿದ್ದ ಕಾರ್ಡುದಾರರಿಗೆ ತಿಳಿಸಿದರು.