ಗ್ಯಾರಂಟಿ ಯೋಜನೆ, ಬಿಜೆಪಿ ಚೊಂಬು ಕಾಂಗ್ರೆಸ್‌ಗೆ ಚುನಾವಣೆ ವಿಷಯ

| Published : Apr 25 2024, 01:10 AM IST

ಸಾರಾಂಶ

ಗ್ಯಾರಂಟಿ ಜಾರಿಯಾಗಲ್ಲ, ಯಶಸ್ವಿಯಾಗಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಯಶಸ್ಸನ್ನು ಕಂಡು ಬಿಜೆಪಿಯವರೇ ಗ್ಯಾರಂಟಿಯನ್ನು ಕದ್ದು ಪ್ರಚಾರ ಮಾಡುತ್ತಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಹಾಗೂ ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕುರಿತು ‘ಬಿಜೆಪಿ ಚೊಂಬು’ ಹೀಗೆ ಎರಡು ಮಾದರಿ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಚುನಾವಣೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ತಿಳಿಸಿದರು.

ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ಸರಿ ಸುಮಾರು 6 ಲಕ್ಷ ಎಸ್ಸಿಎಸ್ಟಿ, ಹಿಂದುಳಿದ ವರ್ಗಗಳ ಜನರಿಗೆ ಸಿಗಬೇಕಾದ ಮೀಸಲಾತಿ ಕಿತ್ತುಕೊಂಡಿದೆ ಎಂದು ಇದೇ ವೇಳೆ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಶಸ್ವಿಯಾಗಿ 10 ತಿಂಗಳಿಂದ ಗ್ಯಾರಂಟಿ ಯೋಜನೆ ಜಾರಿಯಲ್ಲಿದ್ದು, ಜನ ಸಂತೃಪ್ತರಾಗಿದ್ದಾರೆ ಎಂದು ಅಂಕಿ ಸಂಖ್ಯೆಗಳನ್ನು ಮುಂದಿಟ್ಟರು. ಕೇಂದ್ರ ಬಿಜೆಪಿ ಎನ್‌ಡಿಆರ್‌ಎಫ್‌ ಪರಿಹಾರ ನೀಡಿಲ್ಲ. ತೆರಿಗೆ, ಪರಿಹಾರ ಕೇಳಿದರೆ ಬರಿ ಚೊಂಬು ಕೊಡುತ್ತಿದೆ ಎಂದು ಕೈಯಲ್ಲಿ ಚೊಂಬು ಪ್ರದರ್ಶಿಸಿ ಕುಹಕವಾಡಿದರು.

ಗ್ಯಾರಂಟಿ ಜಾರಿಯಾಗಲ್ಲ, ಯಶಸ್ವಿಯಾಗಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಯಶಸ್ಸನ್ನು ಕಂಡು ಬಿಜೆಪಿಯವರೇ ಗ್ಯಾರಂಟಿಯನ್ನು ಕದ್ದು ಪ್ರಚಾರ ಮಾಡುತ್ತಿದ್ದಾರೆ ಎಂದು ಛೇಡಿಸಿದ ಸುರ್ಜೆವಾಲಾ, ನಾವು ಕೇಳುತ್ತಿರುವ ಪರಿಹಾರ, ತೆರಿಗೆ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು ಎಂದು ಹೇಳಿದರು.

ಈ ಚುನಾವಣೆಯಲ್ಲಿ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಪ್ರಚಾರ ಮಾಡುತ್ತಿದ್ದು, 10 ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನೇ ಹೇಳುತ್ತಿಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ತಿಳಿಸುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟು, ಮಹದಾಯಿ, ಭದ್ರಾ ಯೋಜನೆ ವಿಚಾರದಲ್ಲೂ ಚೊಂಬು ತೋರಿಸುತ್ತಿದ್ದಾರೆ, ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ಸೇರಿ ಎಲ್ಲ ಗ್ಯಾರಂಟಿಗಳಲ್ಲಿ ಚೊಂಬು ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಮೀಸಲು ಕಿತ್ತುಕೊಳ್ಳುತ್ತಿರುವುದು ಅವರು:

ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ಸರಿ ಸುಮಾರು 6 ಲಕ್ಷ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ಜನರಿಗೆ ಸಿಗಬೇಕಾದ ಮೀಸಲಾತಿಯನ್ನು ಕಿತ್ತುಕೊಂಡಿದೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲು ಕಿತ್ತುಕೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಆದರೆ, ಎಸ್ಸಿ-ಎಸ್ಟಿ, ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಸ್ಥಾನಮಾನ ಹೆಚ್ಚಿಸಲು ಮೀಸಲಾತಿ ಕೊಟ್ಟಿದ್ದೇ ಕಾಂಗ್ರೆಸ್ ಎಂಬುದನ್ನು ಮರೆಯಬಾರದು. ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ 73 ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ವಹಿಸಿ, ಅಲ್ಲಿ ಸಿಗಬೇಕಾದ ಮೀಸಲಾತಿಯನ್ನು ಹರಣ ಮಾಡಿದೆ. ಎಸ್ಸಿ-ಎಸ್ಟಿ ಒಬಿಸಿಯವರಿಗೆ ಮೀಸಲು ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕೇಂದ್ರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆ ಭರ್ತಿ ಮಾಡುತ್ತಿಲ್ಲ. ಸಂವಿಧಾನ ಬದಲಿಸುವ ಹುನ್ನಾರ ನಡೆಸಿದೆ ಎಂದು ತಿಳಿಸಿದರು.

ಬಹಿರಂಗ ಚರ್ಚೆಗೆ ಸವಾಲು

ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆ ಸಿದ್ದರಿದ್ದೇವೆ. ಅದಕ್ಕೆ ಪತ್ರಕರ್ತರೆ ತೀರ್ಪುಗಾರರಾಗಲಿ. ಕರ್ನಾಟಕದಲ್ಲಿ ಸಿಎಂ, ಡಿಸಿಎಂ ಚರ್ಚೆಗೆ ಬರಲಿದ್ದಾರೆ. ನೀವು ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಂಬಂಧಿಸಿ ಸ್ವಾಮಿನಾಥನ್ ಆಯೋಗ ವರದಿ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದಂದ್ವ ನಿಲುವು ಹೊಂದಿದೆ. ಅದೊಂದು ರೀತಿ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಸಲೀಮ ಅಹ್ಮದ, ಪ್ರಕಾಶಗೌಡ ಪಾಟೀಲ ಸೇರಿದಂತೆ ಅನೇಕ ಇದ್ದರು.