ಸಾರಾಂಶ
ಕೊಪ್ಪಳ:
ಪಂಚ ಗ್ಯಾರಂಟಿ ಯೋಜನೆ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸದೆ ಜನರಿಗೆ ವಂಚಿಸಿದೆ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಜೆಡಿಎಸ್ ನಾಯಕರು ಆಗ್ರಹಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಗೃಹಲಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯ ಖಂಡಿಸಿ, ಬಸವೇಶ್ವರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಒಂದೆಡೆ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ, ಮತ್ತೊಂದೆಡೆ ದರ ಏರಿಸಲಾಗಿದೆ. ಇನ್ನೊಂದೆಡೆ ವಿದ್ಯುತ್ ಕಂಪನಿಗಳಿಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಗೃಹಲಲಕ್ಷ್ಮೀ ಯೋಜನೆಯಡಿ ₹ 7,517 ಕೋಟಿ ಪಾವತಿಸಬೇಕಿದೆ. ಚುನಾವಣೆ ಇದ್ದಾಗ ಮಾತ್ರ ನಗದು ವರ್ಗಾವಣೆಯಾಗುತ್ತದೆ ಎಂದು ಕಿಡಿಕಾರಿದರು.ಸಚಿವರೊಬ್ಬರು ಪ್ರತಿ ತಿಂಗಳು ಹಣ ಕೊಡಲು ಇದೇನು ವೇತನವಲ್ಲ ಎಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ₹ 5,786 ಕೋಟಿ ಬಾಕಿ ಇಡಲಾಗಿದೆ. ಯುವನಿಧಿ ಯೋಜನೆ ಅನುಷ್ಠಾನ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಮಾತನಾಡಿ, ಮೈಕ್ರೋಫೈನಾನ್ಸ್ ಸಾಲ ವಸೂಲಿ ಬಾಧೆಗೆ ಲಕ್ಷಾಂತರ ಕುಟುಂಬಗಳು ತುತ್ತಾಗಿವೆ. ಹಾಲು, ಬಸ್ ಹಾಗೂ ವಿದ್ಯುತ್ ದರ ಏರಿಸಿ ಮಧ್ಯಮ ವರ್ಗದವರಿಗೆ ಅನ್ಯಾಯ ಮಾಡಲಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಹ ಸರ್ಕಾರಿ ಕಣ್ಮುಚ್ಚಿ ಕುಳಿತಿದೆ ಎಂದರು.ಮಾದಕ ವಸ್ತು ಮಾರಾಟ ಹೆಚ್ಚಾಗಿದೆ. ಅಪರಾಧಗಳು ನಿಯಂತ್ರಣ ತಪ್ಪಿವೆ. ಕಿಡಿಗೇಡಿಗಳು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಆರೋಪಿಸಿದರು. ಗಾಢ ನಿದ್ರೆಯಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಏಟು ಬೀಸಬೇಕು. ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವಿಠ್ಠಲ್ ಚೌಗಲೆ ಪ್ರತಿಭಟನಕಾರರಿಂದ ರಾಜ್ಯಪಾಲರಿಗೆ ಬರೆಯಲ್ಪಟ್ಟ ಮನವಿ ಸ್ವೀಕರಿಸಿದರು. ಈ ವೇಳೆ ಮಂಜುನಾಥ ಸೊರಟೂರು, ಮೂರ್ತಪ್ಪ ಗಿಣಗೇರಿ, ದೇವಪ್ಪ ಹಳ್ಳಿಕೇರಿ, ಶರಣಪ್ಪ ಜಡಿ, ಮಲ್ಲನಗೌಡ್ರ ಕೋನನಗೌಡ್ರ, ಸೋಮನಗೌಡ, ಶಿವಕುಮಾರ ಮಹಾಂತಯ್ಯನಮಠ, ರವಿ ಮಾಗಳ್, ವೀರೇಶಗೌಡ ಚಿಕ್ಬಗನಾಳ, ಯಮನಪ್ಪ ಕಟೀಗಿ, ಶಾಂತಕುಮಾರ, ಮಹೇಶ ಕಂದಾರಿ, ಮಾರುತಿ ಪೇರ್ಮೀ, ವಸಂತ ಹಟ್ಟಿ, ಮಂಜುನಾಥ ವದಗನಾಳ, ದ್ಯಾಮಣ್ಣ ಕಲಕೇರಿ, ಯಂಕಪ್ಪ ಮಣೆಗಾರ, ಲೋಕೇಶ ಬಾರಕೇರ, ರಂಗಪ್ಪ ಬೋವಿ, ರವಿ ಮೇಧಾರ, ಮಂಜು ಗಬ್ಬೂರ, ವೀರೇಶ ಮುದ್ದಾಬಳ್ಳಿ, ಅರುಣ ಕುಮಾರ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.