ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘಕ್ಕೆ ಈಗಾಗಲೇ ತಾಲೂಕುವಾರು ಆಯ್ಕೆ ಮಾಡಿರುವ ಪಟ್ಟಿಯನ್ನು ಪರಿಷ್ಕರಿಸಲು ಸೋಮವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘಕ್ಕೆ ಈಗಾಗಲೇ ತಾಲೂಕುವಾರು ಆಯ್ಕೆ ಮಾಡಿರುವ ಪಟ್ಟಿಯನ್ನು ಪರಿಷ್ಕರಿಸಲು ಸೋಮವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಪಂ ಕೆಡಿಪಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಈ ಕುರಿತು ವಿಷಯ ಪ್ರಸ್ತಾಪಿಸಿದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರು ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಸಮಿತಿ ಸದಸ್ಯರ ಗಮನಕ್ಕೆ ಬಾರದೆ ಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು, ಈ ಪಟ್ಟಿಯನ್ನು ಪರಿಷ್ಕರಿಸುವಂತಾಗಬೇಕು ಎಂದು ಸಭೆಯ ಗಮನಕ್ಕೆ ತಂದರು.

ಈ ಕುರಿತು ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಪಟ್ಟಿಯಲ್ಲಿ ಲೋಪಗಳಿದ್ದಲ್ಲಿ ಪರಿಷ್ಕರಿಸುವಂತಾಗಬೇಕು. ಆದರೆ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಗಮನಕ್ಕೆ ತಂದು ಪಟ್ಟಿಯನ್ನು ತಯಾರಿಸಬೇಕಿತ್ತು ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಅಧಿಕಾರಿಗಳು ಪಟ್ಟಿ ತಯಾರಿಸುವುದು ಸರಿಯಲ್ಲ ಎಂದು ವಿ.ಪಿ. ಶಶಿಧರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘದ ಸದಸ್ಯತ್ವ ಪಡೆಯಲು 1000 ರೂ. ನೀಡಿ ನೋಂದಣಿಯಾಗಬೇಕು. ಆ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಶಿಶು ಕಲ್ಯಾಣ ಅಧಿಕಾರಿಗಳು ಮಾಹಿತಿ ಒದಗಿಸಿರುವಂತೆ ಪಟ್ಟಿ ಕಳುಹಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯ 5 ತಾಲೂಕಿನಲ್ಲಿ ಪ್ರತಿ 10 ಜನರಂತೆ 50 ಜನರನ್ನು ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಂಘದ ನಿರ್ದೇಶಕರಾಗಿ ಪಟ್ಟಿ ತಯಾರಿಸಲಾಗಿದೆ ಎಂದು ವಿವರಿಸಿದರು. ಅಂಗನವಾಡಿ ಕಾರ್ಯಕರ್ತರ ನೇಮಕಾತಿ ಸಂಬಂಧ ಸ್ಥಳೀಯರಿಗೆ ಆದ್ಯತೆ ನೀಡುವಂತೆ ವಿ.ಪಿ. ಶಶಿಧರ ಸಲಹೆ ನೀಡಿದರು. ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ಮಾತನಾಡಿ, ಪಡಿತರ ಚೀಟಿ ವಿತರಣೆಯಲ್ಲಿ ಸಾಕಷ್ಟು ಗೊಂದಲವಿದ್ದು, ಬಿಪಿಎಲ್ ಪಡಿತರ ಚೀಟಿದಾರರನ್ನು ಎಪಿಎಲ್‌ಗೆ ವರ್ಗಾಯಿಸಿದ್ದು, ಇದನ್ನು ಕೂಡಲೇ ಪರಿಶೀಲಿಸಬೇಕು. ಬಡವರಿಗೆ ಅನ್ಯಾಯವಾಗಬಾರದು ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಧರ್ಮಜ ಉತ್ತಪ್ಪ ಅವರು, ಬಿಪಿಎಲ್‌ನಿಂದ ಎಪಿಎಲ್ ಆಗಿದ್ದಲ್ಲಿ ಯಾವುದೇ ಕುಟುಂಬ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಮನವಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆಯುವಂತಾಗಬೇಕು. ಅರ್ಹರೆಲ್ಲರಿಗೂ ಬಿಪಿಎಲ್ ಪಡಿತರ ಚೀಟಿ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು. ಈ ಸಂದರ್ಭ ಮಾತನಾಡಿದ ಆಹಾರ ನಿರೀಕ್ಷಕರಾದ ವೀಣಾ ಅವರು, ಇತ್ತೀಚೆಗೆ ಬಿಪಿಎಲ್ ನಿಂದ ಎಪಿಎಲ್‌ಗೆ ಬದಲಾಗಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ ಈ ಹಿಂದೆ ಆಗಿರುವುದನ್ನು ಸದ್ಯ ಬದಲಾಯಿಸಲು ಅವಕಾಶವಿಲ್ಲ ಎಂದು ವಿವರಿಸಿದರು. ಯುವನಿಧಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಂಜುನಾಥ್ ಅವರು, ಜಿಲ್ಲೆಯಲ್ಲಿ ಪದವಿ 1625, ಡಿಪ್ಲೋಮಾ 24 ಮಂದಿ ಒಟ್ಟು 1649 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. ಇದುವರೆಗೆ 438.87 ಲಕ್ಷ ರು.ಪಾವತಿಯಾಗಿದೆ ಎಂದು ಹೇಳಿದರು. ಯುವನಿಧಿ ಯೋಜನೆ ಸಂಬಂಧಿಸಿದಂತೆ ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುವಂತೆ ಧರ್ಮಜ ಉತ್ತಪ್ಪ ಸಲಹೆ ನೀಡಿದರು. ಗೃಹಜ್ಯೋತಿ ಯೋಜನೆಯಡಿ 2,01,331 ಸ್ಥಾವರಗಳಲ್ಲಿ ಗೃಹಜ್ಯೋತಿ ಯೋಜನೆ ಕಲ್ಪಿಸಲಾಗಿದ್ದು, ಶೇ.99.15 ರಷ್ಟು ಪ್ರಗತಿ ಸಾಧಿಸಲಾಗಿದೆ. 731.28 ಲಕ್ಷ ರು. ಸಹಾಯ ಧನ ಕಲ್ಪಿಸಲಾಗಿದೆ ಎಂದು ಸೆಸ್ಕ್ ಇಇ ರಾಮಚಂದ್ರ ಹೇಳಿದರು. ಶಕ್ತಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಈರಸಪ್ಪ ಅವರು ಅಗತ್ಯವಿರುವ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ನಾಸೀರ್ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು. ಸದಸ್ಯರಾದ ಸುಂದರ ಎಸ್.ಕೆ., ಮುಸ್ತಪ, ಪಿ.ಎಲ್. ಸುರೇಶ್, ಎನ್.ಆರ್. ಪದವಿ, ಕೆ.ಜಿ. ಫೀಟರ್, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಪಿ.ವಿ., ಜಿಪಂ ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಬಿ ಇತರರು ಹಲವು ಮಾಹಿತಿ ನೀಡಿದರು.