ಗ್ಯಾರಂಟಿ ಯೋಜನೆ ಬಂದ್ ಮಾಡಲ್ಲ: ಸಚಿವ ವೈದ್ಯ

| Published : Nov 02 2024, 01:25 AM IST

ಸಾರಾಂಶ

ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ, ಉಪಮುಖ್ಯಮಂತ್ರಿ ಅವರು ಬಡವರ ಪರ ಇದ್ದವರು. ಈ ಕಾರ್ಯಕ್ರಮ ಬೇಕು ಎಂದು ಹೇಳಿ ಜಾರಿಗೆ ತಂದವರು.

ಕಾರವಾರ: ಗ್ಯಾರಂಟಿ ಯೋಜನೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಕನಸಿನ ಯೋಜನೆಯಾಗಿದ್ದು, ಯಾವ ಗ್ಯಾರಂಟಿಯನ್ನೂ ಸರ್ಕಾರ ಬಂದ್ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದರು.ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಜನರಿಗೆ ಅವಶ್ಯಕತೆಯಿದೆ ಎಂದು ಮಾಧ್ಯಮಗಳ ಮೂಲಕ ಹೇಳುತ್ತಿದ್ದಾರೆ. ಬಿಜೆಪಿಯವರು ಜನರಿಗೆ ಬೇಡ ಎಂದು ಹೇಳುತ್ತಿದ್ದರು. ಸರ್ಕಾರ ದಿವಾಳಿಯಾಗಿದೆ ಎನ್ನುತ್ತಿದ್ದರು. ಆದರೆ ಈಗ ಅವಶ್ಯಕತೆಯಿದೆ ಎನ್ನುವುದು ತಿಳಿಯಿತು. ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ, ಉಪಮುಖ್ಯಮಂತ್ರಿ ಅವರು ಬಡವರ ಪರ ಇದ್ದವರು. ಈ ಕಾರ್ಯಕ್ರಮ ಬೇಕು ಎಂದು ಹೇಳಿ ಜಾರಿಗೆ ತಂದವರು. ಉಳ್ಳವರು ಇಂತಹ ಯೋಜನೆ ಸ್ವಇಚ್ಛೆಯಿಂದ ಬಿಟ್ಟುಕೊಡಬೇಕು ಎಂದು ಕೋರಿದರು.ಮಲ್ಲಿಕಾರ್ಜುನ ಖರ್ಗೆ ಗ್ಯಾರಂಟಿ ಯೋಜನೆ ವಿರುದ್ಧ ಮಾತನಾಡಿದ ಬಗ್ಗೆ ಪ್ರಶ್ನಿಸಿದಾಗ, ಸರ್ಕಾರದ ಬಳಿ ಗ್ಯಾರಂಟಿಗೆ ಹಣದ ಸಮಸ್ಯೆಯಿಲ್ಲ. ಗ್ಯಾರಂಟಿಗಾಗಿ ಬಜೆಟ್‌ನಲ್ಲಿ ತಗಲುವುದು ಶೇ. ೨೦ರಷ್ಟು ಹಣ ಮಾತ್ರವಾಗಿದೆ. ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತಂದ ಬಳಿಕ ಸರ್ಕಾರ ದಿವಾಳಿಯಾಗಿಲ್ಲ. ಬೇರೆ ರಾಜ್ಯದಲ್ಲಿ ಜಾರಿಗೆ ತರುವಾಗ ಬಜೆಟ್ ನೋಡುವಂತೆ ಹಿರಿಯರಾಗಿ ಖರ್ಗೆ ಸಲಹೆ ನೀಡಿರಬಹುದು ಎಂದು ಅಭಿಪ್ರಾಯಪಟ್ಟರು.ಶಿರಸಿ- ಕುಮಟಾ ರಸ್ತೆ (ರಾಷ್ಟ್ರೀಯ ಹೆದ್ದಾರಿ ೭೬೬ಇ) ಸಂಚಾರ ಬಂದ್ ಮಾಡುವ ಬಗ್ಗೆ ಪ್ರಶ್ನಿಸಿದಾಗ, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುವುದರಿಂದ ಆ ರಸ್ತೆ ಬಂದ್ ಮಾಡಬಾರದು ಎನ್ನುವುದು ತಮ್ಮ ಅಭಿಪ್ರಾಯವಾಗಿದೆ. ಈ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳಲು ರಿತೇಶಕುಮಾರ್ ಸಿಂಗ್ ಎನ್ನುವ ಒಬ್ಬ ಅಧಿಕಾರಿ ಇದ್ದಾರೆ. ಅವರು ಉಸ್ತುವಾರಿಯೋ ಅಥವಾ ಆರ್‌ಎನ್‌ಎಸ್, ಐಆರ್‌ಬಿ ಕಂಪನಿಗಳ ಸೆಟ್ಲಮೆಂಟ್‌ಗೆ ಬರುತ್ತಾರೋ ಗೊತ್ತಿಲ್ಲ. ನಮ್ಮ ಯಾವ ಮೀಟಿಂಗ್‌ಗೂ ಬಂದಿಲ್ಲ. ಅವರು ನಡೆಸಿದ ಮೀಟಿಂಗ್‌ಗೂ ಕರೆದಿಲ್ಲ. ಅವರು ಈ ರಸ್ತೆ ಬಂದ್ ಮಾಡಿಸುವಂತೆ ಡಿಸಿಗೆ ಸೂಚಿಸಿದ್ದಾರೆ. ಹಿಂದಿನ ಡಿಸಿ, ಈಗಿನ ಡಿಸಿ ಮಾಡಿದ ಆದೇಶವಲ್ಲ. ಉಸ್ತುವಾರಿ ಕಾರ್ಯದರ್ಶಿ ಹೇಳಿದಂತೆ ಕಳೆದ ತಿಂಗಳು ಸಂಚಾರ ಬಂದ್ ಆಗಬೇಕಿತ್ತು. ಈಗ ನ. ೧೫ರಿಂದ ಬಂದ್ ಮಾಡಿಸುವಂತೆ ಆದೇಶ ಕೊಟ್ಟಿದ್ದಾರೆ. ಅವರು ಯಾವುದರ ಉಸ್ತುವಾರಿ ಎಂದು ತಿಳಿದುಕೊಳ್ಳುತ್ತೇವೆ ಎಂದ ಅವರು, ಎರಡು ಬಾರಿ ಒಪ್ಪಂದವಾಗಿದೆ. ಸಂಚಾರ ಬಂದ್ ಮಾಡಿ ಕೊಡಬೇಕು ಎಂದು ಇಲ್ಲ. ಸಂಸದರು ಬಂದ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಶಾಸಕರೂ ಬೆಂಬಲ ಕೊಡುತ್ತಿದ್ದಾರೆ. ಅವರ ಆಸಕ್ತಿ ಏನಿದೆ ಗೊತ್ತಿಲ್ಲ. ಅವರು ಆ ರೀತಿ ಬೆಂಬಲ ಕೊಡುತ್ತಿರುವುದರಿಂದ ತಾವೂ ಸುಮ್ಮನಿದ್ದೇನೆ ಎಂದರು.

ವಕ್ಫ್‌ ಬಗ್ಗೆ ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ: ಸಚಿವ ವೈದ್ಯ

ಕಾರವಾರ: ಒಂದೇ ಸಲ ಆ ರೀತಿ ಆರ್‌ಟಿಸಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ವಕ್ಫ್ ಬಗ್ಗೆ ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ರೈತನ, ಸಂಸ್ಥೆಯ ಹೆಸರನ್ನು ಏಕಾಏಕಿ ಸೇರಿಸಲು ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಆರ್‌ಟಿಸಿ ಆಗಿರುವುದು ಇಲ್ಲಿಯವರೆಗೂ ಬಂದಿರುವುದನ್ನು ನೋಡಿದ್ದೇವೆ. ಒಂದು ವೇಳೆ ಆ ರೀತಿಯಾದಲ್ಲಿ ಮೂಲ ವಾರಸುದಾರರಿಗೆ ಸಿಕ್ಕೇ ಸಿಗುತ್ತದೆ. ಹಾಗೊಂದು ವೇಳೆ ನಮ್ಮ ಜಿಲ್ಲೆಯಲ್ಲಿ ತೊಂದರೆಯಾದರೆ ತಮ್ಮ ಬಳಿಗೆ ಬನ್ನಿ. ಸರಿಮಾಡಿಕೊಡುತ್ತೇವೆ ಎಂದ ಅವರು, ೨೦೧೩ರಿಂದ ೧೮ರ ವರೆಗೆ ಮಂಜೂರಾದ ಸೇತುವೆ ಇದುವರೆಗೂ ನಿರ್ಮಾಣವಾಗಿಲ್ಲ. ಈ ಹಿಂದೆ ೫ ವರ್ಷದ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಮಾಡಿಲ್ಲವೆಂದರೆ ನಾವು ಒಂದೂವರೆ ವರ್ಷದಲ್ಲಿ ಮಾಡಲು ಸಾಧ್ಯವಿದೆಯೇ? ಬೆಂಗಳೂರಿನ ಕೆಆರ್‌ಡಿಎಲ್ ಕಚೇರಿಗೆ ಹೋಗಿ ಸಭೆ ಮಾಡಿದ್ದೇವೆ. ಯಾವುದೇ ಸೇತುವೆಯಿದ್ದರೂ ಮಾಡುತ್ತೇವೆ ಎಂದರು.