ಸಾರಾಂಶ
ಸರ್ಕಾರದ ಅನುದಾನ ವಿಳಂಬಕ್ಕೆ ಗ್ಯಾರಂಟಿಗಳು ಕಾರಣವಲ್ಲ.ಹಿಂದಿನ ಸರ್ಕಾರದಲ್ಲಾದ ಕಾಮಗಾರಿಗಳ ಪೂರ್ಣಗೊಳಿಸಲು ಬಿಲ್ ಬಿಡುಗಡೆ ಮಾಡುತ್ತಿರುವುದೇ ಅನುದಾನ ವಿಳಂಬಕ್ಕೆ ಕಾರಣ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪ್ರತಿಪಾದಿಸಿದರು. ಗುಂಡ್ಲುಪೇಟೆಯಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಿಂದಿನ ಕಾಮಗಾರಿಗಳಿಗೆ ಬಿಲ್ ಬಿಡುಗಡೆ ಕಾರಣ । ಬಲಚವಾಡಿಯಲ್ಲಿ ಚರಂಡಿ ಕಾಮಗಾರಿಗೆ ಶಾಸಕ ಗಣೇಶ್ ಗುದ್ದಲಿಪೂಜೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಸರ್ಕಾರದ ಅನುದಾನ ವಿಳಂಬಕ್ಕೆ ಗ್ಯಾರಂಟಿಗಳು ಕಾರಣವಲ್ಲ.ಹಿಂದಿನ ಸರ್ಕಾರದಲ್ಲಾದ ಕಾಮಗಾರಿಗಳ ಪೂರ್ಣಗೊಳಿಸಲು ಬಿಲ್ ಬಿಡುಗಡೆ ಮಾಡುತ್ತಿರುವುದೇ ಅನುದಾನ ವಿಳಂಬಕ್ಕೆ ಕಾರಣ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪ್ರತಿಪಾದಿಸಿದರು.
ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ೪೦ ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಸಮಾರಂಭದಲ್ಲಿ ಮಾತನಾಡಿ, ಐದು ಸಾವಿರ ಕೋಟಿ ಕಾಮಗಾರಿಗಳಿಗೆ ಸರ್ಕಾರ ಬಿಲ್ ಪಾವತಿಸುತ್ತಿರುವ ಕಾರಣ ಅಭಿವೃದ್ಧಿಗೆ ಬರುವ ಅನುದಾನ ಸ್ವಲ್ಪ ವಿಳಂಬವಾಗಿದೆ. ಗ್ಯಾರಂಟಿಗಳ ಅನುಷ್ಠಾನದಿಂದಲ್ಲ ಎಂದು ಹೇಳಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೨೫ ಕೋಟಿ ರು.ನಲ್ಲಿ ೬೦ ಹೆಚ್ಚು ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ನಡೆಯಲಿದ್ದು, ಸದ್ಯಕ್ಕೀಗ ೨೫ ಗ್ರಾಮಗಳಲ್ಲಿ ಗುದ್ದಲಿಪೂಜೆ ನಡೆದಿದೆ ಎಂದರು.
ನನ್ನನ್ನು ಶಾಸಕರಾಗಿ ಕ್ಷೇತ್ರದ ಜನರು ಆಯ್ಕೆ ಮಾಡಿದ್ದಾರೆ. ನನ್ನ ಕರ್ತವ್ಯವಾಗಿ ನೂರಕ್ಕೆ ನೂರರಷ್ಟು ಕೆಲಸ ಆಗದಿದ್ದರೂ ಶೇ.೬೦ ರಿಂದ ೭೫ ರಷ್ಟು ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಇನ್ನೂ ಮೂರು ವರ್ಷ ಶಾಸಕನಾಗಿ ಇರುತ್ತೇನೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಗ್ಯಾರಂಟಿಗಳಿಂದಲೂ ಯಾವುದೇ ನಷ್ಟವಿಲ್ಲ. ಇರುವ ಅವಧಿಯಲ್ಲಿ ಕೈಲಾದ ಕೆಲಸ ಮಾಡುತ್ತೇನೆ. ಗ್ರಾಮದ ಅಭಿವೃದ್ಧಿಗೆ ಇಲಾಖಾವಾರು ಕೆಲಸ ಆಗಬೇಕಿದೆ. ಇನ್ನೂ ಹೆಚ್ಚಿನ ಅನುದಾನ ತಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ವಿಪಕ್ಷಗಳ ಮಾತಿಗೆ ತಲೆ ಕೆಡೆಸಿಕೊಳ್ಳಬೇಡಿ ಎಂದರು.
ಗುದ್ದಲಿಪೂಜೆ ಸಮಾರಂಭದಲ್ಲಿ ಗ್ರಾಮದ ಭಿಕ್ಷದ ಮಠದ ರಾಜೇಂದ್ರಸ್ವಾಮಿ, ಗ್ರಾಪಂ ಅಧ್ಯಕ್ಷೆ ಜಿ.ಮಂಗಳಮ್ಮ, ಜಿಪಂ ಮಾಜಿ ಉಪಾಧ್ಯಕ್ಷರಾದ ಕೆ.ಎಸ್.ಮಹೇಶ್, ಪಿ.ಮಹದೇವಪ್ಪ,ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೇಪಾಪುರ ಸಿದ್ದಪ್ಪ, ಎಪಿಎಂಸಿ ಅಧ್ಯಕ್ಷ ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಮಾದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.