ನರಗುಂದ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದು ಸಮಾಜದ ಪ್ರಗತಿಗೆ ಅನುಕೂಲವಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ವಿವೇಕ ಯಾವಗಲ್ ತಿಳಿಸಿದರು.

ತಾಲೂಕಿನ ಹದಲಿ ಗ್ರಾಮದಲ್ಲಿ 2026- 27ನೇ ಸಾಲಿನ 2ನೇ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಾಡಿನ ಜನರ ತಲಾದಾಯವನ್ನು ಹೆಚ್ಚಿಸಿದೆ ಎಂದರು.

ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳಲ್ಲಿ ತಾಲೂಕಿನ ಪ್ರಗತಿಯೂ ಸರಾಸರಿ ಶೇ. 99ರಷ್ಟಾಗಿದೆ. ಇದಕ್ಕೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಪ್ಪ ಗಿರಿತಿಮ್ಮಣ್ಣವರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ 23589 ಫಲಾನುಭವಿಗಳಿಗೆ 2026ರ ಫೆಬ್ರವರಿಯವರೆಗೆ 30 ಕಂತುಗಳ ಧನಸಹಾಯವನ್ನು ಕೊಡಮಾಡಲಾಗಿದೆ. ಇನ್ನೂ 825 ಯಜಮಾನಿಯರಿಗೆ ಯೋಜನೆಯ ಸೌಲಭ್ಯ ನೀಡುವುದು ಬಾಕಿಯಿದೆ ಎಂದರು.

ತಾಲೂಕಿನ ಆಹಾರ ನಿರೀಕ್ಷಕ ಅನಿಲ ಪವಾರ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ತಲಾ 10 ಕೆಜಿಯಂತೆ 23191 ಪಡಿತರ ಚೀಟಿಗಳಡಿ 79159 ಫಲಾನುಭವಿಗಳಿಗೆ ಅಕ್ಕಿಯನ್ನು 2026ರ ಜೂನ್ ಅಂತ್ಯದವರೆಗೆ ವಿತರಿಸಿದೆ ಎಂದರು.


ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಎಂ. ಖುದಾವಂದ ಮಾತನಾಡಿ, ಶಕ್ತಿ ಯೋಜನೆಯಡಿ 25462 ಸ್ಥಾವರಗಳ ಪೈಕಿ 25213 ಸ್ಥಾವರಗಳು ನೋಂದಣಿಯಾಗಿದ್ದು, 2022- 23ನೇ ಸಾಲಿನ ಸರಾಸರಿ ವಿದ್ಯುತ್ ಬಳಕೆಯನ್ನಾಧರಿಸಿ ಗರಿಷ್ಠ 200 ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್ ವಿತರಣೆ ಮಾಡಲಾಗುತ್ತಿದೆ. ಇನ್ನೂ 249 ಸ್ಥಾವರಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ಅಧಿಕಾರಿ ರಮೇಶ ಮಾತನಾಡಿ, 2026ರ ಮೇ ವರೆಗೆ 794 ಅಭ್ಯರ್ಥಿಗಳ ನೋಂದಣಿಗೊಂಡು ಅದರಲ್ಲಿ 3 ಡಿಪ್ಲೊಮಾ ಹಾಗೂ 262 ಪದವಿಧರರು ಒಳಗೊಂಡಂತೆ ಒಟ್ಟು 623 ಅರ್ಹರಿಗೆ ಡಿಬಿಟಿಯಡಿ 20,55,1500 ಪ್ರೋತ್ಸಾಹಧನವನ್ನು ನೀಡಲಾಗಿದೆ ಎಂದರು.

ಕೆಎಸ್ಆರ್‌ಟಿಸಿ ಘಟಕದ ಸಹಾಯಕ ನಾಗರಾಜ ಮಾತನಾಡಿ, ಸರ್ಕಾರದ ಶಕ್ತಿ ಯೋಜನೆಯ ಆರಂಭದಿಂದ ಇಂದಿನವರೆಗೆ 34234023 ಪ್ರಯಾಣಿಕರಿಗೆ ಸೇವೆ ನೀಡಿದ್ದು, ಆ ಮೂಲಕ ಸಂಸ್ಥೆಗೆ ₹12697.98 ಲಕ್ಷ ಆದಾಯ ಬಂದಿದೆ ಎಂದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಟಿ.ಬಿ. ಶಿರಿಯಪ್ಪಗೌಡ್ರ, ವೀರೇಶ ಚುಳಕಿ, ವಿನಾಯಕ ಹಡಗಲಿ, ಉಮಾ ದ್ಯಾವನೂರ, ವೀರಯ್ಯ ಹುಚ್ಚಪ್ಪಯ್ಯನಮಠ, ಚಂದ್ರಶೇಖರ ಪಾಟೀಲ, ಶೇಖರಗೌಡ ಮುದ್ನೂರ, ಬಸವರಾಜ ಹೊಂಗಲ, ದೇವರಾಜ ನಾಗನೂರ, ರಮಜಾನಸಾಬ ನದಾಫ, ಹನುಮಂತ ರಾಮಣ್ಣವರ, ಮೌಲಾಸಾಬ ಅರಬಜಮಾದಾರ, ಗದಿಗೆಪ್ಪ ಮಂತ್ರಿ, ಗೀತಾ ಛಲವಾದಿ, ಬಸಪ್ಪ ಬದ್ನಿಕಾಯಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗವೇಣಿ ಸೂಲಕಟ್ಟಿ, ಪ್ರದೀಪ ಕದಂ, ಗ್ರಾಪಂ ಸಿಬ್ಬಂದಿ ಮತ್ತು ಆಶಾ ಅಂಗನವಾಡಿ ಕಾರ್ಯಕರ್ತರು ಹಾಗೂ ಸ್ವ ಸಹಾಯ ಗುಂಪುಗಳ ಪದಾಧಿಕಾರಿಗಳು ಇದ್ದರು.