ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ: ಡಿ.ಟಿ.ಶ್ರೀ ನಿವಾಸ್

| Published : Jun 10 2024, 12:46 AM IST

ಸಾರಾಂಶ

ಕಾಂಗ್ರೆಸ್ ಪಕ್ಷ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಮತ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀ ನಿವಾಸ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಕಾಂಗ್ರೆಸ್ ಪಕ್ಷ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಮತ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀ ನಿವಾಸ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಐದು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಶಾಸಕರು ಸಹಕಾರ ನೀಡಿದ್ದಾರೆ. ಈ ಗೆಲುವನ್ನು ಶಿಕ್ಷಕರಿಗೆ ಅರ್ಪಿಸುತ್ತೇನೆ. ನಮ್ಮ ಮುಂದೆ ದೊಡ್ಡ ಸವಾಲು ಇದೆ. ಬಹಳ ನಿರೀಕ್ಷೆ ಇಟ್ಟುಕೊಂಡು ಶಿಕ್ಷಕರು ನನಗೆ ಮತ ನೀಡಿದ್ದಾರೆ ಎಂದರು.

ಹಳೆಯ ಪಿಂಚಿಣಿ ವ್ಯವಸ್ಥೆ ಮರು ಸ್ಥಾಪನೆ, 7ನೇ ವೇತನ ಆಯೋಗದ ಶಿಫಾರಸು ಜಾರಿ, ಅನುದಾನಿತ ಶಾಲೆಗಳ ಖಾಲಿ ಹುದ್ದೆಗಳ ನೇಮಕ, ವೇತನ ತಾರತಮ್ಯ ನಿವಾರಣೆ, ಅನುದಾನಿತ ಶಾಲೆಗಳ ಸಿಬ್ಬಂದಿಗೆ ಪಿಂಚಿಣಿ ವ್ಯಾಪ್ತಿಗೆ ಒಳ ಪಡಿಸುವುದು ಸೇರಿದಂತೆ ಹಲವಾರು ಸವಾಲುಗಳಿವೆ. ಮುಂದಿನ ನಾಲ್ಕು ವರ್ಷ ನಮ್ಮದೇ ಸರ್ಕಾರ ಇದ್ದು, ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಹಂತ ಹಂತವಾಗಿ ಎಲ್ಲಾ ಬೇಡಿಕೆಗಳು ಈಡೇರಲಿವೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಡಿಮೆ ಸೀಟು ಗೆದಿದ್ದೆ ಎಂಬ ನೆಪ ಮಾಡಿ ಯಾವ ಗ್ಯಾರಂಟಿ ನಿಲ್ಲಿಸುವುದಿಲ್ಲ‌. ಈ ಹಿಂದೆ ಜಾರಿಗೆ ಬಂದ ಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ ನಿಂತಿಲ್ಲ. ಹಾಗೆಯೇ 2023 ರಲ್ಲಿ ಸರಕಾರ ಘೋಷಿಸಿದ ಯಾವ ಗ್ಯಾರಂಟಿಯೂ ನಿಲ್ಲಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಗ್ಯಾರಂಟಿ ಗಳು ಜಾರಿಗೆ ಬರಲಿವೆ ಎಂದರು.

ಮುಂದಿನ ನಾಲ್ಕು ವರ್ಷಗಳ ಕಾಲ ಸರ್ಕಾರಕ್ಕೆ ತೊಂದರೆಯಿಲ್ಲ. ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ರಾಮಮಂದಿರ ಕಟ್ಟಿ 400 ಸೀಟು ಗೆಲ್ಲುತ್ತೇವೆ ಎಂದುಕೊಂಡವರನ್ನೇ ಅಯೋಧ್ಯೆಯ ಜನ ಸೋಲಿಸಿ ಕಳುಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಜನ ಸೋಲಿಸಿದ್ದಾರೆ. ವಿಶ್ವಗುರುವಿಗೆ ಸರಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಜಸ್ಟ್ ಪಾಸ್ ಅಲ್ಲ. ಫೇಲ್ ಆಗಿದ್ದಾರೆ. ಅವರ ಪಕ್ಷದ ಭದ್ರತೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮುಖಂಡರುಗಳು, ಕಾರ್ಯಕರ್ತರು, ಶಿಕ್ಷಕರು, ಉಪಸ್ಥಿತರಿದ್ದರು