ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಭರವಸೆ: ಶಿವಾನಂದಸ್ವಾಮಿ

| Published : Jan 04 2025, 12:30 AM IST

ಸಾರಾಂಶ

ಚಿಕ್ಕಮಗಳೂರು, ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಭರವಸೆ ಜೊತೆಗೆ ಸ್ವಾವಲಂಬಿ ಜೀವನ ನಿರ್ವಹಿಸಲು ಸಹಕಾರಿ ಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

- ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಿತ್ತಿ ಪತ್ರಗಳ ಬಿಡುಗಡೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಭರವಸೆ ಜೊತೆಗೆ ಸ್ವಾವಲಂಬಿ ಜೀವನ ನಿರ್ವಹಿಸಲು ಸಹಕಾರಿ ಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಸಹಾಯಕ ಮತ್ತು ಬಡ ಕುಟುಂಬಗಳಿಗೆ ವರದಾನವಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ಸಮಾಜದ ಹಿಂದುಳಿದ ವರ್ಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಅವರ ಜೀವನ ಮಟ್ಟ ಸುಧಾರಿಸಲು ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಬೆಂಬಲವಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಸಹಕಾರಿಯಾಗಿವೆ ಎಂದರು.ಜಿಲ್ಲೆಯಾದ್ಯಂತ 2024ರ ಡಿಸೆಂಬರ್ ವರೆಗೆ ಗೃಹಲಕ್ಷ್ಮಿ ಯೋಜನೆಯಡಿ 2,14,404 ಫಲಾನುಭವಿಗಳು ನೋಂದಾಯಿಸಿ ಕೊಂಡಿದ್ದು ₹42,88,08,000 ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,52,350 ಫಲಾನುಭವಿಗಳಿದ್ದು ಒಟ್ಟು ₹11,80,99,645 ಗಳಷ್ಟು ವೆಚ್ಚ ಭರಿಸಲಾಗಿದೆ. 2,63,229 ಪಡಿತರ ಕಾರ್ಡ್‌ಗಳಿದ್ದು ₹178.86 ಕೋಟಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದ ಅವರು, ವಿವಿಧ ತಾಂತ್ರಿಕ ಸಮಸ್ಯೆಗಳಿಂದ ಬಾಕಿ ಇರುವ ಫಲಾನುಭವಿಗಳಿಗೆ ಹಣ ವರ್ಗಾಹಿಸಲು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು. ಮಹಿಳಾ ಸಬಲೀಕರಣದ ಮಹತ್ವದ ಶಕ್ತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 3,27,91,785 ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಸೌಲಭ್ಯ ಪಡೆದಿದ್ದಾರೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ 11,822 ಪದವಿ ಹಾಗೂ 81 ಡಿಪ್ಲೋಮಾ ಪೂರ್ಣಗೊಳಿಸಿದ ನೋಂದಾಯಿತ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಪ್ರತಿ ತಿಂಗಳು ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ವಿವಿಧ ತಾಂತ್ರಿಕ ದೋಷಗಳಿಂದ ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿತ ರಾಗಿರುವವರನ್ನು ಗುರುತಿಸಿ ಅರ್ಹರಿಗೆ ಯೋಜನೆ ಫಲ ದೊರಕಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ನಾಗರಿಕರಿಗೂ ತಲುಪಿಸಲು ಕಾರ್ಯಕ್ರಮ ಆಯೋಜಿಸಿ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಲಾಗುತ್ತಿದೆ. ಯುವ ಜನತೆಗೆ ಉದ್ಯೋಗ ಸೃಷ್ಠಿಸಿ, ಸ್ವಾವಲಂಭಿ ಬದುಕು ನಿರ್ಮಿಸಿ ಕೊಡುವ ಉದ್ದೇಶದಿಂದ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕ್ರಮ ವಹಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳು ಹಾಗೂ ಬ್ಯಾನರ್‌ಗಳನ್ನು ಅಂಟಿಸಿ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ರಾಜಗೋಪಾಲ್, ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಜೇಮ್ಸ್ ಡಿಸೋಜ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.3 ಕೆಸಿಕೆಎಂ 1ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಜಿಪಂ ಸಿಇಒ ಕೀರ್ತನಾ, ಯೋಜನಾಧಿಕಾರಿ ರಾಜಗೋಪಾಲ್‌ ಇದ್ದರು.