ಕಾರ್ಕಳ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದಿರುವ ಅನೇಕ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಹೇಳಿದರು.

ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಿಂದ ಕುಟುಂಬಗಳ ದಿನನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ನೆರವಾಗುತ್ತಿದೆ ಎಂದರು.ಸಭೆಯಲ್ಲಿ ಮಾಹಿತಿ ನೀಡಿದ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಲತಾ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 37,742 ಮಂದಿ ನೋಂದಾಯಿಸಿಕೊಂಡಿದ್ದು, ಕೆವೈಸಿ ಹಾಗೂ ಐಟಿ-ಜಿಎಸ್ಟಿ ಪರಿಶೀಲನೆ ಪೂರ್ಣಗೊಳ್ಳದ ಕಾರಣ 760 ಮಂದಿಗೆ ಮಾತ್ರ ಹಣ ಪಾವತಿಯಾಗಿಲ್ಲ. ಉಳಿದ ಅರ್ಹ ಫಲಾನುಭವಿಗಳಿಗೆ ಮೇ ತಿಂಗಳವರೆಗೆ ಅನುದಾನ ಜಮೆಯಾಗಿದೆ ಎಂದರು.ಯೋಜನೆ ಆರಂಭವಾದ ಬಳಿಕ 1,257 ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವ ಪ್ರಕರಣಗಳ ಪರಿಶೀಲನೆ ನಡೆಯುತ್ತಿದ್ದು, ಅರ್ಹರಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಸರಿನ ಗೊಂದಲದಿಂದ ಓರ್ವ ಪುರುಷನಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿದ್ದ ಪ್ರಕರಣ ಸರಿಪಡಿಸಲಾಗಿದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ 669 ಮಂದಿ ನೋಂದಾಯಿಸಿಕೊಂಡಿದ್ದು, 589 ಫಲಾನುಭವಿಗಳಿಗೆ ಒಟ್ಟು ₹1.63 ಕೋಟಿ ಅನುದಾನ ಪಾವತಿಸಲಾಗಿದೆ ಎಂದು ಜಿಲ್ಲಾ ಜಾಬ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಲತಾ ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ/ಎಸ್‌ಟಿ ಸಮುದಾಯದವರು ಕಡ್ಡಾಯವಾಗಿ ಜಾತಿ ಪ್ರಮಾಣಪತ್ರವನ್ನು ನ್ಯಾಯಬೆಲೆ ಅಂಗಡಿಯಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು. ಹೊಸ ಬಿಪಿಎಲ್ ಕಾರ್ಡ್ ವಿತರಣೆ ಸದ್ಯ ಸ್ಥಗಿತಗೊಂಡಿದ್ದು, ಮಾರಣಾಂತಿಕ ಕಾಯಿಲೆ ಇರುವವರಿಗೆ ಮಾತ್ರ ಹೊಸ ಕಾರ್ಡ್‌ಗೆ ಅವಕಾಶವಿದೆ ಎಂದು ಹೇಳಿದರು.ಮೆಸ್ಕಾಂ ಎಇಇ ಶಿಲ್ಪಾ ಮಾಹಿತಿ ನೀಡಿ, ಜೂನ್ ತಿಂಗಳಲ್ಲಿ ಗೃಹಜ್ಯೋತಿ ಯೋಜನೆಯಡಿ 41,642 ಫಲಾನುಭವಿಗಳಿಗೆ ₹2.79 ಕೋಟಿ ಅನುದಾನ ಪಾವತಿಸಲಾಗಿದೆ. ತಾಲೂಕಿನಲ್ಲಿ ಶೇ.60ರಷ್ಟು ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಪರಿಶೀಲನೆಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಸಹಕಾರದೊಂದಿಗೆ ಪೂರ್ಣಗೊಳಿಸಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳ ಪರಿಣಾಮ ಕುರಿತು ಲಂಡನ್ ವಿಶ್ವವಿದ್ಯಾಲಯದ ಅಧ್ಯಯನದ ಭಾಗವಾಗಿ ನಿಟ್ಟೆ ವಿಶ್ವವಿದ್ಯಾಲಯದ ಮೂಲಕ ಕಾರ್ಕಳ ತಾಲೂಕಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಅಜಿತ್ ಹೆಗ್ಡೆ ತಿಳಿಸಿದರು.ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕೃಷ್ಣಾನಂದ ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.