ರಾಮನಗರ: ದೇಶದ ಹಲವು ರಾಜ್ಯಗಳಲ್ಲಿ ಬಂದು ಹೋದ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಮೊದಲ ದಿನದಿಂದಲೇ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ರಾಜು ಬಣ್ಣಿಸಿದರು
ರಾಮನಗರ: ದೇಶದ ಹಲವು ರಾಜ್ಯಗಳಲ್ಲಿ ಬಂದು ಹೋದ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಮೊದಲ ದಿನದಿಂದಲೇ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ರಾಜು ಬಣ್ಣಿಸಿದರು.
ನಗರದ ಜಿಪಂನಲ್ಲಿ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಅನುಷ್ಠಾನದಲ್ಲಿ ಒಂದು ತಿಂಗಳು ಹಿಂದೆ ಮುಂದೆಯಾದರೂ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಶೇ.95 ಜನರನ್ನು ತಲುಪಿವೆ. ಇದರಿಂದ ರಾಜ್ಯದ ಜನ ಜೀವನದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಹೇಳಿದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲ ನಾಯಕರು, ಸೇರಿ ದೇಶದಲ್ಲಿ ಎಲ್ಲಿಯೂ ಕಾಣಸಿಗದ ಪಂಚ ಗ್ಯಾರಂಟಿಯಂತಹ ಅತ್ಯುತ್ತಮ ಯೋಜನೆಗಳನ್ನು ರಾಜ್ಯದ ಜನರಿಗಾಗಿ ಜಾರಿಗೊಳಿಸಿದ್ದಾರೆ. ಈ ಯೋಜನೆಗಳ ಸವಲತ್ತುಗಳನ್ನು ಎಲ್ಲಾ ಜಾತಿ, ವರ್ಗದ ಜನರು ಪಡೆಯುತ್ತಿದ್ದಾರೆ. ಇದರ ಉದ್ದೇಶ ಸಮ ಸಮಾಜದ ನಿರ್ಮಾಣ ಮಾಡುವುದಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅಧ್ಯಕ್ಷರು ಶಕ್ತಿ ಯೋಜನೆಯಡಿ 2023ರ ಜೂನ್ ಮಾಹೆಯಿಂದ 2026ರ ಅಕ್ಟೋಬರ್ ಮಾಹೆವರೆಗೆ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಪ್ರಯಾಣ ದರದ ಮೊತ್ತ 422,01,61,910 ರುಪಾಯಿ ಆಗಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ ಪ್ರಾರಂಭವಾದಂದಿನಿಂದ ಇದುವರೆಗೂ ಒಟ್ಟಾರೆ 49,951 ಕೋಟಿ ರು. ವೆಚ್ಚ ಮಾಡಲಾಗಿದೆ.ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 32 ಕಂತುಗಳಲ್ಲಿ 2026ರ ಜುಲೈ ಮಾಹೆಯವರೆಗೆ 2,57,840 ಫಲಾನುಭವಿಗಳಿಗೆ 1741,02,68,000 ಹಣ ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 2025ರ ಫೆಬ್ರವರಿ ಮಾಹೆಯಿಂದ 2026ರ ಸೆಪ್ಟೆಂಬರ್ ಮಾಹೆವರೆಗೆ 1,98,40,776 ಪಡಿತರ ಚೀಟಿದಾರರಿಗೆ ಒಟ್ಟು 9,06,930 ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 2024ರ ಜನವರಿ ಮಾಹೆಯಿಂದ 2026ರ ಜುಲೈ ಮಾಹೆವರೆಗೆ ಒಟ್ಟು ಅರ್ಹ 4,973 ಡಿಪ್ಲೊಮಾ ಹಾಗೂ ಪದವೀಧರ ಫಲಾನುಭವಿಗಳಿಗೆ 15,00,19,500 ರು. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಇಲಾಖೆಗಳು ಶ್ರಮಿಸಬೇಕು ಎಂದು ಕೆ.ರಾಜು ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಹದೇಶ್, ಶೇಖರ್, ಶಿವಪ್ರಸಾದ್, ಸಿದ್ದೇಗೌಡ, ರಾಮನಗರ ತಾಲೂಕು ಅಧ್ಯಕ್ಷ ರಾಜು ವಿ.ಎಚ್., ಸದಸ್ಯರಾದ ಬೆಳ್ಳಿಯಪ್ಪ, ಶಿವಮಾದಯ್ಯ, ಸ್ವಾಮಿ, ಮಹದೇವ್, ರಮೇಶ್, ಜಯಣ್ಣ, ಚಿಕ್ಕಣ್ಣ, ವನಜಾ, ಶೋಭಾ, ಜಿಪಂ ಉಪಕಾರ್ಯದರ್ಶಿ ಧನರಾಜ್ ಉಪಸ್ಥಿತರಿದ್ದರು.
5ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಕೆ.ರಾಜು ಅಧ್ಯಕ್ಷತೆಯಲ್ಲಿ ನಡೆಯಿತು.