ಸಾರಾಂಶ
ಚಿಕ್ಕಮಗಳೂರು, ಗೃಹಲಕ್ಷ್ಮೀ ಯೋಜನೆಯಲ್ಲಿ ತಾಲೂಕಿನ 69,376 ಕುಟುಂಬಗಳ ಯಜಮಾನಿಯರಿಗೆ ಪ್ರತಿ ಮಾಹೆಯಾನ ₹13.87 ಕೋಟಿ ನಗದನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಶೇ. 98.47 ರಷ್ಟು ಪ್ರಗತಿ ಸಾಧಿಸ ಲಾಗಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗೃಹಲಕ್ಷ್ಮೀ ಯೋಜನೆಯಲ್ಲಿ ತಾಲೂಕಿನ 69,376 ಕುಟುಂಬಗಳ ಯಜಮಾನಿಯರಿಗೆ ಪ್ರತಿ ಮಾಹೆಯಾನ ₹13.87 ಕೋಟಿ ನಗದನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಶೇ. 98.47 ರಷ್ಟು ಪ್ರಗತಿ ಸಾಧಿಸ ಲಾಗಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿದೆ. ಕುಟುಂಬದ ನಿರ್ವಹಣೆ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು ಆ ನಿಟ್ಟಿನಲ್ಲಿ ಪ್ರತಿ ತಿಂಗಳು ಎರಡು ಸಾವಿರದಂತೆ 2023-24ನೇ ಸಾಲಿನವರೆಗೆ ₹240 ಕೋಟಿಯನ್ನು ಯಜಮಾನಿಯರ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ 38,729 ಗ್ರಾಹಕರು ನೋಂದಣಿಯಾಗಿದೆ. ಈ ಪೈಕಿ 24803 ಶೂನ್ಯ ಬಿಲ್ ಪಡೆದಿರುವ ಫಲಾನುಭವಿಗಳ ಗ್ರಾಹಕರಿಗೆ ಸರ್ಕಾರ ಒಟ್ಟು ₹12 ಕೋಟಿ ಹಣ ಮೆಸ್ಕಾಂ ಭರಿಸಿದ್ದು, 200 ಯೂನಿಟ್ ಒಳಗೆ ಬಳಸುತ್ತಿರುವ ಸಾರ್ವಜನಿಕರಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೇಳಿದರು.ಶಕ್ತಿ ಯೋಜನೆಯಲ್ಲಿ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ನ.ರಾ.ಪುರ ವಿಭಾಗದಿಂದ ಒಟ್ಟು ಆರಂಭದಿಂದ ಈವರೆಗೆ ₹67.22 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಸಾರಿಗೆ ಇಲಾಖೆಗೆ ಸರ್ಕಾರ ₹19.49 ಕೋಟಿ ನಗದು ಭರಿಸಿದೆ. ಇದರಿಂದ ಹಲವಾರು ಮಹಿಳೆಯರು ಅತಿಹೆಚ್ಚು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿ ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದರು.ಹಸಿವು ಮುಕ್ತ ಭಾರತ ನಿರ್ಮಾಣದಡಿ ರಾಜ್ಯ ಸರ್ಕಾರ ಅನ್ಯಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಪೈಕಿ ತಾಲೂಕಿನಲ್ಲಿ ಆರಂಭದಿಂದ 45,754 ಕಾರ್ಡ್‌ದಾರರಿಗೆ ಒಟ್ಟು ₹61.16 ಕೋಟಿ ನಗದನ್ನು ನೇರ ಖಾತೆಗೆ ಜಮಾಯಿಸಿದೆ. ಜನವರಿ ಮಾಹೆ ಯಿಂದ ನಗದು ಬದಲಾಗಿ ಪೂರ್ಣಪ್ರಮಾಣದ ಅಕ್ಕಿ ವಿತರಿಸುವ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.ನಿರುದ್ಯೋಗ ಪದವಿ ಹಾಗೂ ಡಿಪ್ಲೋಮಾ ಯುವಕರಿಗೆ ಜೀವನ ಸುಧಾರಣೆಗೆ ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ 8 ಮಂದಿ ಸೌಲಭ್ಯ ಪಡೆದಿದ್ದು. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾ ಯಿಸಿ ಮಾಸಾಶನ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ತಿಳಿಸಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ವಿಜಯ್‌ಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಸಣ್ಣ ಪುಟ್ಟ ಲೋಪದೋಷಗಳು ಕಂಡು ಬಂದಲ್ಲಿ ಆಯಾಯ ಇಲಾಖೆಗಳು ಮಾಸಿಕ ಸಭೆಗಳಲ್ಲಿ ಚರ್ಚಿಸಿ ಪರಿಹರಿಸುವ ಕಾರ್ಯ ಮಾಡಿದಾಗ ಯೋಜನೆಗಳು ಸಫಲತೆ ಕಾಣಲಿದೆ ಎಂದು ತಿಳಿಸಿದರು.ಪ್ರಾಧಿಕಾರದ ಸಮಿತಿ ಸದಸ್ಯ ಗೌಸ್ ಮೊಹಿದ್ಧೀನ್ ಮಾತನಾಡಿ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬೇಸಿಗೆ ಕಾಲದ ಕಾರಣ ಹೆಚ್ಚು ಆದ್ಯತೆ ಕುಡಿಯುವ ನೀರಿಗೆ ಕೊಡಬೇಕು ಎಂದಾಗ, ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಉತ್ತರಿಸಿ 300 ಲೀಟರ್‌ಗೆ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲೇ ಅಳವಡಿಸುತ್ತೇವೆ ಎಂದರು.ಸಭೆಯಲ್ಲಿ ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ, ಪ್ರಾಧಿಕಾರದ ಉಪಾಧ್ಯಕ್ಷ ಉಪ್ಪಳ್ಳಿ ಅನ್ಸರ್ ಆಲಿ, ಸದಸ್ಯರಾದ ನಾಗೇಶ್ ರಾಜ್ ಅರಸ್, ಜೇಮ್ಸ್, ಎಲ್.ಎಂ.ನಾಗರಾಜು, ನರೇಂದ್ರ, ಹಸೈನಾರ್ ಆಲಿ, ರೋಹಿತ್, ವಿದ್ಯಾ, ಜಯಂತಿ, ಧರ್ಮಯ್ಯ, ತಿಮ್ಮೇಗೌಡ, ಕೃಷ್ಣ ಉಪಸ್ಥಿತರಿದ್ದರು. 25 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.