ಗ್ಯಾರಂಟಿ ಯೋಜನೆಗಳು ಕುಟುಂಬದ ಆರ್ಥಿಕ ಚೇತರಿಕೆಗೆ ಸಹಕಾರಿ: ಕೆ.ಎಸ್.ಆನಂದ್

| Published : Feb 05 2024, 01:49 AM IST

ಸಾರಾಂಶ

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 25 ಸಾವಿರ ರು. ತಲುಪುವ ಮೂಲಕ ಸ್ವಲ್ಪಮಟ್ಟಿಗೆ ಆರ್ಥಿಕ ಚೇತರಿಕೆಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ಪಂಚನಹಳ್ಳಿಯಲ್ಲಿ ಜನಸ್ಪಂದನಾ ಸಭೆ

ಕನ್ನಡಪ್ರಭ ವಾರ್ತೆ,ಕಡೂರು

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 25 ಸಾವಿರ ರು. ತಲುಪುವ ಮೂಲಕ ಸ್ವಲ್ಪಮಟ್ಟಿಗೆ ಆರ್ಥಿಕ ಚೇತರಿಕೆಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶನಿವಾರ ಕಡೂರು ವಿಧಾನಸಭಾ ಕ್ಷೇತ್ರದ ಪಂಚನಹಳ್ಳಿಯಲ್ಲಿ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜನ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ಯಾರಂಟಿಗಳಿಂದ ರಾಜ್ಯಮತ್ತು ದೇಶ ದಿವಾಳಿಯಾಗುತ್ತದೆ ಎಂದು ನಮ್ಮರಾಜಕೀಯ ವಿರೋಧಿಗಳು ಮಾತನಾಡುತ್ತಾರೆ. ಆದರೆ ಕಳೆದ 8 ತಿಂಗಳಿನಿಂದ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ರಾಜ್ಯ ಸರಕಾರಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ ಎಂದರು. ಜನರ ಸಮಸ್ಯೆ ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳಲು ಸರ್ಕಾರದ ಆದೇಶದ ಹೊರತಾಗಿಯೂ ಆರು ತಿಂಗಳಿಗೊಮ್ಮೆ ಕ್ಷೇತ್ರದ ಹೋಬಳಿವಾರು ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂಬ ಅಪ ಪ್ರಚಾರಕ್ಕೆ ಜನರು ಕಿವಿಗೊಡ ಬಾರದು. ಸರಕಾರ ಯಾವುದೇ ಒಂದು ಯೋಜನೆ ಜಾರಿ ಮಾಡಿದ ನಂತರ ಅದನ್ನು ಸ್ಥಗಿತಗೊಳಿಸಲು ಬರುವುದಿಲ್ಲ ಎಂದರು.

ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಐದು ಗ್ಯಾರಂಟಿಗಳ ಸವಲತ್ತು ಪಡೆಯಲು ಎದುರಾಗಿರುವ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆ ನಿವಾರಿಸಲು ಜನಸ್ಪಂದನ ಸಭೆಗಳನ್ನು ಅಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ನಿಡುವಳ್ಳಿ ಗ್ರಾಪಂ ಆಧ್ಯಕ್ಷ ಎನ್.ಸಿ.ಕಾಂತರಾಜು ಮಾತನಾಡಿ. ಸಮಾಜದ ಕಟ್ಟಕಡೆ ವ್ಯಕ್ತಿಗೂ ಸರಕಾರದ ಸವಲತ್ತುಗಳು ದೊರೆಯಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸರಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ತಾಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್, ಸಿಡಿಪಿಒ ಶಿವಪ್ರಕಾಶ್, ಆಹಾರ ನಿರೀಕ್ಷಕರಾದ ಶಿಲ್ಪಾ, ನಿಡುವಳ್ಳಿ, ಆಣೇಗೆರೆ, ತಿಮ್ಮಲಾಪುರ, ಗಂಗನಹಳ್ಳಿ ಗ್ರಾಪಂ ಅಧ್ಯಕ್ಷ ಎನ್.ಸಿ.ಕಾಂತರಾಜ್,ರತ್ನಮ್ಮ,ಸರೋಜಾಬಾಯಿ,ಮುರಳಿ,ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

--- ಕೋಟ್‌---

- ಪಂಚನಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ಅಂದಾಜು 200 ಅರ್ಜಿಗಳು ಬಂದಿವೆ. ಗ್ಯಾರಂಟಿ ಯೋಜನೆಗಳ ಜೊತೆಗೆ 94ಸಿ, ಪೆನ್ಷನ್, ನಿವೇಶನ, ಕೆರೆ ಒತ್ತುವರಿ, ಸಾಗುವಳಿ ಚೀಟಿ, ವಿದ್ಯುತ್ ಸಮಸ್ಯೆಗಳಿಗೆ ಸಂಭಂಧಿಸಿದ ಅರ್ಜಿಗಳೂ ಬಂದಿವೆ. ತ್ವರಿತವಾಗಿ ವಿಲೇವಾರಿ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಂಚನಹಳ್ಳಿ ಹೋಬಳಿ ಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ 4133 ಮಹಿಳೆಯರಲ್ಲಿ 4048 ಮಹಿಳೆಯರಿಗೆ ಹಣ ಬರುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ ಕೇವಲ 35 ಪಡಿತರ ಕಾರ್ಡದಾರರು ಹೊರಗುಳಿದಿದ್ದಾರೆ

– ಕೆ.ಎಸ್.ಆನಂದ್,

ಶಾಸಕ, ಕಡೂರು .

--ಬಾಕ್ಸ್---

ಹೆಣ್ಣು ಕೊಡಿಸಿ

ಪಂಚನಹಳ್ಳಿ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಸಭೆಯಲ್ಲಿ ಬಿಟ್ಟೇನಹಳ್ಳಿ ಗ್ರಾಮದ ರೈತ ಬಿ.ಬಿ.ವಿಜಯಕುಮಾರ್ ಹೆಣ್ಣು ಕೊಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಘಟನೆ ನಡೆಯಿತು. ನನಗೆ 33 ವರ್ಷ. ಆದರೆ, ರೈತರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಯಾವ ಜಾತಿ ಹೆಣ್ಣಾದರೂ ಪರವಾಗಿಲ್ಲ ಮದುವೆಗೆ ಸಿದ್ಧ. ದಯಮಾಡಿ ಹೆಣ್ಣು ಕೊಡಿಸಿ ಎಂದು ಶಾಸಕ ಆನಂದ್ ಅವರ ಬಳಿ ಅಲವತ್ತುಕೊಂಡರು. ಆಗ ಶಾಸಕ ಆನಂದ್ ಸಿಡಿಪಿಒ ಅವರಿಗೆ ಸಮಸ್ಯೆ ಪರಿಹಾರ ಸೂಚಿಸುವಂತೆ ಹೇಳಿದರು. ರಾಜ್ಯದಲ್ಲಿರುವ 6 ಮಹಿಳಾ ನಿಲಯಗಳಲ್ಲಿ ಅನಾಥ ಹೆಣ್ಣು ಮಕ್ಕಳನ್ನು ಸರ್ಕಾರದಿಂದ ಪೋಷಿಸಲಾಗುತ್ತದೆ. ಅಲ್ಲಿಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಹುಡುಗನ ಹಿನ್ನಲೆ ಉತ್ತಮ ಎನಿಸಿದರೆ ಮಾತ್ರ ಹೆಣ್ಣು ಕೊಡುತ್ತಾರೆ. ಮದುವೆಯಾಗದ ಯುವಕರು ಪ್ರಯತ್ನಿಸಬಹುದು ಎಂದು ತಿಳಿಸಿದರು.3ಕೆಕೆಡಿಯು1.ಕಡೂರು ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ ಪಂಚನಹಳ್ಳಿಯಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಯಿತು. 3ಕೆಕೆಡಿಯು1ಎ.ಪಂಚನಹಳ್ಳಿಯಲ್ಲಿ ನಡೆದ ಜನ ಸ್ಪಂದನಾ ಸಭೆಯಲ್ಲಿ ರೈತ ವಿಜಯಕುಮಾರ್‌ ಹೆಣ್ಣು ಕೊಡಿಸುವಂತೆ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದರು.