ಸಾರಾಂಶ
ಹಾನಗಲ್ಲ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿರುವ ಜೊತೆಗೆ ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹ ಏರಿಕೆಯಾಗಿದೆ. ಜಿಡಿಪಿ ಸಹ ಗಮನಾರ್ಹ ಸುಧಾರಣೆ ಕಂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಆಯೋಜಿಸಿದ್ದ ಯುವ ಮತ್ತು ಮಹಿಳಾ ಸಬಲೀಕರಣದಲ್ಲಿ ಗ್ಯಾರಂಟಿ ಯೋಜನೆಗಳ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ಇದೀಗ ಗುಜರಾತ್ ರಾಜ್ಯವನ್ನೂ ಹಿಂದಿಕ್ಕಿದ್ದು, ಹೂಡಿಕೆದಾರರನ್ನು ಸೆಳೆಯುತ್ತಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ. 12ರಷ್ಟು ಹೆಚ್ಚಾಗಿದೆ. ನಿರುದ್ಯೋಗ ಪ್ರಮಾಣ ಶೇ. 4.3ನಿಂದ ಶೇ. 2.4ಕ್ಕೆ ಇಳಿದಿದೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆಗಳೆಂದು ಟೀಕಿಸುತ್ತಿದ್ದವರೇ ಇದೀಗ ಗಟ್ಟಿ ಯೋಜನೆಗಳೆಂದು ಅರಿತು ಬೇರೆ ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಕಳೆದ ಏಳೆಂಟು ವರ್ಷಗಳಿಂದ ನಾನಾ ಕಾರಣಗಳಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ತಲೆದೋರಿದೆ. ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಜನತೆಯನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಮಳೆ ಆಶ್ರಿತ ಪ್ರದೇಶ ನಮ್ಮದಾಗಿರುವುದರಿಂದ ಯಾವುದೂ ಖಚಿತವಾಗಿಲ್ಲ. ಹಾಗಾಗಿ, ಹಸಿವಿನಿಂದ ಯಾರೊಬ್ಬರೂ ಬಳಲಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಲಾಭ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸಿಗುತ್ತಿರುವ ಕಾರಣ ಕುಟುಂಬಗಳಲ್ಲಿ ನೆಮ್ಮದಿ ಕಾಣುತ್ತಿದ್ದೇವೆ. ಹಾವೇರಿ ಜಿಲ್ಲೆಯೊಂದಕ್ಕೆ ಪ್ರತಿವರ್ಷ ಗ್ಯಾರಂಟಿ ಯೋಜನೆಗಳಿಂದ ಸಾವಿರ ಕೋಟಿಗೂ ಅಧಿಕ ಆರ್ಥಿಕ ನೆರವು ಲಕ್ಷಾಂತರ ಕುಟುಂಬಗಳಿಗೆ ಸಿಗುತ್ತಿದೆ. ಬೆಳಗಾವಿ ವಿಭಾಗಕ್ಕೆ ಹೊಸದಾಗಿ 300 ಬಸ್ ಒದಗಿಸಲು ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ. ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ಗೌರವದಿಂದ ವರ್ತಿಸುವಂತೆ ಸೂಚನೆ ನೀಡಲಾಗಿದೆ ಎಂದರು.ಸಮಿತಿಯ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಲಾಭವನ್ನು 62 ಸಾವಿರಕ್ಕೂ ಅಧಿಕ ಕುಟುಂಬಗಳು ಪಡೆಯುತ್ತಿದ್ದು, ಅರ್ಹರು ಸೌಲಭ್ಯಗಳಿಂದ ವಂಚಿತರಾಗದಂತೆ ಕಾಳಜಿ ವಹಿಸಲಾಗಿದೆ ಎಂದರು.
ಬಿಇಒ ವಿ.ವಿ. ಸಾಲಿಮಠ, ಪ್ರಾಚಾರ್ಯ ಡಾ. ಚನ್ನಬಸಪ್ಪ ಕುಮ್ಮೂರ, ಸಮಿತಿಯ ಸದಸ್ಯರಾದ ಲಿಂಗರಾಜ ಮಡಿವಾಳರ, ರಾಜೂ ಗಾಡಗೇರ, ಬಸನಗೌಡ ಪಾಟೀಲ, ಇರ್ಫಾನ್ ಮಿಠಾಯಿಗಾರ, ರಾಮಚಂದ್ರ ಕಲ್ಲೇರ, ಸುಮಾ ಸುಣಗಾರ, ಲಕ್ಷ್ಮೀಬಾಯಿ ಪಾಟೀಲ, ರಾಧಾ ಇಂಗಳಕಿ, ಮಂಜುಳಾ ಹುರುಳಿಕುಪ್ಪಿ, ಪದ್ಮಾ ಬೇಂದ್ರೆ, ನಗಿನಾಬಾನು ಹರವಿ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿ ಇದ್ದರು.ಆರ್ಥಿಕ ಸಬಲತೆ
ಗ್ಯಾರಂಟಿ ಯೋಜನೆಗಳು ಮಹಿಳೆಯರು ಮತ್ತು ಯುವಕರಿಗೆ ಶಕ್ತಿ ತುಂಬಿವೆ. ಫಲಾನುಭವಿ ಕುಟುಂಬಗಳು ಆರ್ಥಿಕ ಸಬಲತೆ ಸಾಧಿಸಿ ನೆಮ್ಮದಿಯ ಬದುಕು ನಡೆಸುವಂತಾಗಿದೆ. ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತಿರುವ ಏಕೈಕ ರಾಜ್ಯ ಕರ್ನಾಟಕ.ಶ್ರೀನಿವಾಸ ಮಾನೆ, ಶಾಸಕ