ಆರ್ಥಿಕ ಸಬಲರನ್ನಾಗಿಸಿದ ಗ್ಯಾರಂಟಿ: ನಾಗಮ್ಮ

| Published : Jan 31 2025, 12:47 AM IST

ಸಾರಾಂಶ

ಕೆರೆ ಕಾಲುವೆ ಉತ್ತಮವಾಗಿಸಲು ಕೋಟಿ ಕೋಟಿಗಟ್ಟಲೆ ಹಣ ತಂದು ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕ ಜಿ.ಎಸ್.ಪಾಟೀಲ ಕಾರ್ಯಕ್ರಮಗಳು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿರುವುದು ಪ್ರಶಂಸನೀಯ

ಡಂಬಳ: ಇಡೀ ದೇಶದಲ್ಲಿ ಮೊದಲ ಬಾರಿಗೆ ಬಡವರ ಹೊಟ್ಟೆ ತುಂಬಿಸುವ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು ಸಿಎಂ ಸಿದ್ದರಾಮಯ್ಯ ಅವರ ಕಾರ್ಯ ಬಡವರ ಶಕ್ತಿ ಇಮ್ಮಡಿಗೊಳಿಸಿ ಆರ್ಥಿಕ ಸಬಲರನ್ನಾಗಿಸಿದೆ ಎಂದು ಹಿರೇವಡ್ಡಟ್ಟಿ ಗ್ರಾಪಂ ಅಧ್ಯಕ್ಷೆ ನಾಗಮ್ಮ ವೆಂಕಪ್ಪ ಬಳ್ಳಾರಿ ಹೇಳಿದರು.

ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ₹ 80ಲಕ್ಷದ ಶರಣಪ್ಪ ನಂದಿಕೋಲ ಜಮೀನಿನಿಂದ ಕಳ್ಳಿಮನೆ ಅವರ ಮನೆಯವರೆಗೆ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ಹಿತಕ್ಕಾಗಿ ಪೇಠಾ ಆಲೂರ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ಮತ್ತು ಕೆರೆ ಕಾಲುವೆ ಉತ್ತಮವಾಗಿಸಲು ಕೋಟಿ ಕೋಟಿಗಟ್ಟಲೆ ಹಣ ತಂದು ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕ ಜಿ.ಎಸ್.ಪಾಟೀಲ ಕಾರ್ಯಕ್ರಮಗಳು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿರುವುದು ಪ್ರಶಂಸನೀಯ ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಮಾತನಾಡಿ, ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆಗಳು ಮಹಿಳಾ ಸಬಲೀಕರಣ ಮತ್ತು ಯುವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಹನಮರಡ್ಡಿ ಮೇಟಿ, ಲೋಕಪ್ಪ ನಂದಿಕೋಲ, ಗ್ರಾಪಂ ಸದಸ್ಯರಾದ ಬಸಪ್ಪ ದ್ಯಾವಣ್ಣವರ, ಸಿದ್ಧಪ್ಪ ಕರೆಕಲ್ಲ, ಜಂದಿಸಾಬ್‌ ಮುಂಡರಗಿ, ಕಾಶಪ್ಪ, ಸಮಾಜ ಸೇವಕ ಅಬ್ದುಲ್ ಕಲಕೇರಿ, ಕಾಶಪ್ಪ ಶಿರುಂದ, ಹನಮಪ್ಪ ಶಿರುಂದ, ಸುರೇಶ ಮುಪ್ಪಿನೆಣ್ಣಿ, ಶರಣಪ್ಪ ಕುಂದರಳ್ಳಿ, ಉಮೇಶ ಕಿರಿಕಿರಿ‌ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.