ಗ್ಯಾರಂಟಿ ನಿಲ್ಲಿಸಲ್ಲ, ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳಲ್ಲ-ಸಿಎಂ ಸಿದ್ದರಾಮಯ್ಯ

| Published : Dec 09 2024, 12:45 AM IST

ಗ್ಯಾರಂಟಿ ನಿಲ್ಲಿಸಲ್ಲ, ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳಲ್ಲ-ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾರಿಂದಲೂ ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳುವುದಿಲ್ಲ. ಕಾರ್ಡ್‌ ಬಂದ್ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಹಾವೇರಿ:ಯಾರಿಂದಲೂ ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳುವುದಿಲ್ಲ. ಕಾರ್ಡ್‌ ಬಂದ್ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಸವಣೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಯಾವ ರಾಜ್ಯದಲ್ಲೂ ಜನರಿಗೆ 10 ಕೆಜಿ ಅಕ್ಕಿ ಕೊಡುತ್ತಿಲ್ಲ, ಯಾವುದಾದರೂ ರಾಜ್ಯದಲ್ಲಿ 10 ಕೆಜಿ ಅಕ್ಕಿ ಕೊಟ್ಟಿದ್ದನ್ನು ಬಿಜೆಪಿಗರು ತೋರಿಸಿದರೆ ನಾನು ಈಗಲೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಯಡಿಯೂರಪ್ಪ, ಬೊಮ್ಮಾಯಿ ಅವರೇ, ನಾನು ಕೊಟ್ಟಿದ್ದ ‌7 ಕೆಜಿ ಅಕ್ಕಿಯನ್ನು ‌4 ಕೆಜಿಗೆ ಇಳಿಸಿದ್ದು ಯಾರಪ್ಪಾ? ಬಿಜೆಪಿಗೆ ಬಡವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ₹ 34 ಕೊಡುತ್ತೇವೆ ಅಕ್ಕಿ ಕೊಡಿ ಅಂದರೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ, ಹೀಗಾಗಿ 5 ಕೆಜಿ ಬದಲಾಗಿ ಹಣ ಕೊಡುತ್ತಿದ್ದೇವೆ. ನಾವು ಯಾವುದೇ ಕಾರಣಕ್ಕೂ ಒಂದು ಕೆಜಿ ಅಕ್ಕಿಯನ್ನು ಕಡಿಮೆ ಮಾಡಲ್ಲ, ಎಷ್ಟೇ ಹಣ ಖರ್ಚಾದರೂ ಗ್ಯಾರಂಟಿ ಯೋಜನೆಗಳನ್ನು ‌ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕ್ಷೇತ್ರದಲ್ಲಿ ನಡೆದ 5 ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿತ್ತು. 25 ವರ್ಷದ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲರ ಶ್ರಮದಿಂದ ಇಲ್ಲಿ‌ ಕಾಂಗ್ರೆಸ್ ಗೆಲುವು ಸಾಧ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಪಠಾಣ ಸೋತಿದ್ದರು. ಪಠಾಣಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬಿಜೆಪಿಯವರು ತಾವು ಗೆದ್ದಾಯ್ತು ಎಂದು ಪ್ರಚಾರ ಆರಂಭಿಸಿದರು. ಆದರೆ, ಕ್ಷೇತ್ರದ ಜನತೆ ನಮ್ಮ ಕೈ ಹಿಡಿದಿದ್ದಾರೆ. ನಾನು ಶಿಗ್ಗಾಂವಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಕೊಟ್ಟಿದ್ದೇವೆ. ಹೀಗಾಗಿ ಇಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದಿದ್ದೆ. ಈ ಕ್ಷೇತ್ರದ ಜನ ಜಾತಿ, ಧರ್ಮ ನೋಡಲ್ಲ, ಕಾಂಗ್ರೆಸ್ ಕಾರ್ಯಕ್ರಮ, ಸಿದ್ಧಾಂತ ನೋಡಿ‌ ಮತ ಹಾಕುತ್ತಾರೆ ಎಂಬ ಧೈರ್ಯ ಇತ್ತು. ನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಗರು ಅಪಪ್ರಚಾರ ಮಾಡಿದ್ದರು. ಈಗ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಮಧ್ಯವರ್ತಿಗಳು ಇಲ್ಲದೇ ಜನರಿಗೆ ನೇರವಾಗಿ ಹಣ ತಲುಪಿದೆ. ರಾಜ್ಯದ 4.5‌ ಕೋಟಿ ಜನರಿಗೆ ನಮ್ಮ ಕಾರ್ಯಕ್ರಮ ತಲುಪುತ್ತಿವೆ.‌ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ₹45-50 ಸಾವಿರ ಸಿಗುತ್ತಿದೆ. ಪ್ರತಿ ವರ್ಷ ₹56 ಸಾವಿರ ಕೋಟಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ ಎಂದರು.2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗಲೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ. ಹೀಗಾಗಿ ಕೇಂದ್ರ ಸರ್ಕಾರ ನಮಗೆ ನ್ಯಾಯಯುಯವಾಗಿ ಕೊಡಬೇಕಾದ ಹಣವನ್ನು ಸರಿಯಾಗಿ ಕೊಡುತ್ತಿಲ್ಲ, ತೆರಿಗೆ ಪಾಲು ಕೊಡುತ್ತಿಲ್ಲ, ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಸರಿಯಾಗಿ ಹಣ ಕೊಡುತ್ತಿಲ್ಲ, ಹಣ ಸಿಗದಂತೆ ಮಾಡಿ ನಮಗೆ ತೊಂದರೆ ಮಾಡುತ್ತಿದ್ದಾರೆ. ಎಷ್ಟೇ ಹಣಕಾಸಿನ ತೊಂದರೆ ಕೊಟ್ಟರೂ ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಘೋಷಿಸಿದರು.