ಸಾರಾಂಶ
ಜಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಮೂರು ಬಾರಿ ಸೋತಿರುವ ಅನುಕಂಪ, ಜನರು ಬದಲಾವಣೆ ಬಯಸುತ್ತಿರುವ ಜಗಳೂರು ಕ್ಷೇತ್ರದ ಮತದಾರರು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಬಸವನಕೋಟೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿದರು.ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕು. ಕಾಂಗ್ರೆಸ್ ಸಂಸದೆಯಾದರೆ ಹೆಚ್ಚಿನ ಅನುದಾನ ತರಲು ಸಿದ್ಧ. ಕುಡಿಯುವ ನೀರು, ನೀರಾವರಿ ಯೋಜನೆ, ಶಿಕ್ಷಣ, 57 ಕೆರೆ ನೀರು ತುಂಬಿಸುವ ಯೋಜನೆಗಳನ್ನು ಜನರು ಆಶೀರ್ವಾದ ಮಾಡಿದರೆ ನಾನು ಕಂಕಣ ಬದ್ಧವಾಗಿ ದುಡಿಯಲು ಶಾಸಕ, ಸಚಿವರಿಗೆ ಕೈ ಜೋಡಿಸುತ್ತೇನೆ. ಎಸ್‌ಎಸ್ ಕೇರ್ ಟ್ರಸ್ಟ್‌ನಿಂದ ಈ ಭಾಗಕ್ಕೆ ಮೊಬೈಲ್ ಬಸ್ ವ್ಯವಸ್ಥೆ ಮೂಲಕ ಗುಣಮಟ್ಟದ ಚಿಕಿತ್ಸೆ ಕೊಡಿಸಲು ಆರಂಭದಲ್ಲಿ ವ್ಯವಸ್ಥೆ ಮಾಡುತ್ತೇವೆ. ನಂತರ ಜಾಗ ನೋಡಿ ಹಂತ ಹಂತವಾಗಿ ಆಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಕಂಕಣ ತೊಟ್ಟು ಅಭ್ಯರ್ಥಿಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. 5 ಗ್ಯಾರಂಟಿ, ಕೇಂದ್ರದಿಂದ 25 ಗ್ಯಾರಂಟಿಗಳನ್ನು ಘೋಷಿಸಿದೆ. ಶಾಸಕನಾಗಿ ನನಗೆ, ಸಚಿವ ಮಲ್ಲಿಕಾರ್ಜುನ್ ಜೊತೆ ಅಭಿವೃದ್ಧಿಗೆ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕೈ ಜೋಡಿಸಿದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಈ ಗೆಲುವು ಇತಿಹಾಸ ಸೃಷ್ಟಿಯಾಗಲಿ. ನಮ್ಮ ಕ್ಷೇತ್ರದಿಂದ ಅಧಿಕ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಈ ವೇಳೆ ಶಾಸಕ ಬಿ.ದೇವೇಂದ್ರಪ್ಪ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ ಸೇರಿದಂತೆ ನೂರಾರು ಮುಖಂಡರು ಸಾಥ್ ನೀಡಿದರು.
ಮಹಿಳೆಯರು ಅಡುಗೆಗೆ ಸೀಮಿತ ಸಮರ್ಥನೆ:ಶಾಸಕ ಶಾಮನೂರು ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅಡುಗೆಗೆ ಸೀಮಿತ ಎಂಬ ಹೇಳಿಕೆ ದೇಶವ್ಯಾಪಿ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಾ.ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿಯವರು ವಾಸ್ತವ ಅಂಶಗಳನ್ನು ಕುರಿತು ಚರ್ಚಿಸುವ ಬದಲು ತಿರುಚಿ ಪ್ರಚಾರ ಮಾಡುವುದರಲ್ಲಿ ಮುಂದಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದು ಒಂದೇ ವಾಖ್ಯ. ಅಭ್ಯರ್ಥಿಯಾದವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಗೆದ್ದ ಮೇಲೆ ಕಮಲದ ಹೂ ತೆಗೆದುಕೊಂಡು ಮೋದಿಗೆ ಅರ್ಪಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ. ಪ್ರಭಾ ಮಲ್ಲಿಕಾರ್ಜುನ್ ಕ್ಷೇತ್ರದಲ್ಲಿ 5 ವರ್ಷ ಸಮಾಜ ಸೇವೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ. ಆದರೆ ಅದನ್ನೇ ಬಿಜೆಪಿ ಅವರು ತಿರುಚಿ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.