ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಐದು ಪ್ರಮುಖ ಗ್ಯಾರಂಟಿಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದು ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯನ್ನು ಟೀಕೆ ಮಾಡುತ್ತಿದ್ದ ಬಿಜೆಪಿಗೆ ಈಗ ಮೋದಿ ಗ್ಯಾರಂಟಿಗೆ ಅಂಟಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಈಗ ಪರಿವರ್ತನೆಯಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಅವರ ಬೂಟಾಟಿಕೆ ತೋರಿಸುತ್ತದೆ. ಈ ಬಾರಿ ಇಂಡಿಯಾ ಒಕ್ಕೂಟ ನಮಗೆ ಹೆಮ್ಮೆ ತಂದಿದೆ ಎಂದರು.
ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಜನರಿಗೆ ತಲುಪಿದೆ. ಬಿಜೆಪಿಯವರು ಹತ್ತು ಸುಳ್ಳು ಹೇಳಿ ನಿಜ ಮಾಡುವವರು. ಈಗ ರಾಹುಲ್ ಗಾಂಧಿ ಅವರನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಮಣಿಪುರದಿಂದ ಮುಂಬೈವರೆಗೆ ನ್ಯಾಯ ಯಾತ್ರೆ ಆರಂಭಿಸಿದ್ದಾರೆ. ಇದು ಯಶಸ್ವಿಯಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.ರಾಜ್ಯದ ಜನತೆ ಬಿಜೆಪಿಯ ಜನವಿರೋಧಿ, ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಜನ ಅಭೂತಪೂರ್ವ ಬೆಂಬಲವನ್ನು ಕಾಂಗ್ರೆಸ್‌ಗೆ ಕೊಟ್ಟಿರುವುದು ಸಂತಸದ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಜೋಡೆತ್ತಿನ ಸಂಘಟನೆ ದೃಷ್ಟಿಯಿಂದ ರಾಜ್ಯದಲ್ಲಿ ಸುಭದ್ರ ಆಡಳಿತ ನಡೆಸುತ್ತಿದೆ ಎಂದು ವಿವರಿಸಿದರು.
ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯನವರು 5 ವರ್ಷದ ಅವಧಿಯಲ್ಲಿ ಕೊಟ್ಟ ಮಾತಿನಂತೆ 165 ಭರವಸೆಗಳನ್ನು ಈಡೇರಿಸಿದ್ದು, ಭಾರತದಲ್ಲಿಯೇ ಪ್ರಥಮ ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ.ಶಿವಕುಮಾರ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ ಎಂದರು.ಭೂತದ ಬಾಯಲ್ಲಿ ಭಗವದ್ಗೀತೆ:
ಜನರಲ್ಲಿ ಮೊದಲು ತಪ್ಪು ಕಲ್ಪನೆ ಇತ್ತು. ಬಿಜೆಪಿ, ಆರ್‌ಎಸ್‌ಎಸ್ ಸುಸಂಸ್ಕೃತರು ಎಂದುಕೊಂಡಿದ್ದರು. ಸಂಸದ ಅನಂತಕುಮಾರ ಹೆಗಡೆ ಬಾಯಿಯಿಂದ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗುತ್ತಿದೆ. ಬಿಜೆಪಿಯಲ್ಲಿ ಮೊದಲು ಐದಾರು ಜನ ಡೋಂಗಿಗಳಿದ್ದರು. ಸಿ.ಟಿ. ರವಿ ಸೇರಿದಂತೆ ಕೆಲವೊಂದಿಷ್ಟು ಜನ ಈಗ ಮನೆ ಸೇರಿದ್ದಾರೆ. ರಾಜ್ಯದ ಮಹಾಮಾರಿಯ ಕೋವಿಡ್ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದಿಂದ ಬಂದಿದೆ ಎಂದವರು. ಇವರು ಸಂವಿಧಾನಾತ್ಮಕವಾಗಿ ಆಡಳಿತ ಮಾಡುವವರಲ್ಲ. ಇವರಿಗೆ ಕೇವಲ ಕೋಮು ಗಲಭೆ ಸೃಷ್ಟಿಸಿ ಆಡಳಿತ ಮಾಡುವವರು. ಅನಂತಕುಮಾರ ಹೆಗಡೆ ಹೇಳಿಕೆಯನ್ನು ಬಿಜೆಪಿಯವರೇ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಮಾತನಾಡುವಾಗ ಹೆಗಡೆ ನೋಡಿಕೊಂಡು ಮಾತನಾಡಬೇಕು ಎಂದು ಎಚ್ಚರಿಸಿದರು.ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಹೋರಾಟಗಾರರಾದ ಕಿತ್ತೂರು ರಾಣಿಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ, ಗೇರಿಲ್ಲಾ ಯುದ್ಧದ ಮೂಲಕ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದು ಇತಿಹಾಸವಾಗಿದೆ ಎಂದರು.
₹262 ಕೋಟಿ ವೆಚ್ಚದಲ್ಲಿ ರಾಯಣ್ಣನ ಸೈನಿಕ ಶಾಲೆ ಹಾಗೂ ಶೌರ್ಯ ವನ ನಿರ್ಮಾಣ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣನ ಸೈನಿಕ ಶಾಲೆ ಹಾಗೂ ಶೌರ್ಯವನ್ನು ಜ.17 ರಂದು ಉದ್ಘಾಟನೆ ಮಾಡಲಾಗುತ್ತಿದೆ ಎಂದ ಅವರು, ಸಂಗೊಳ್ಳಿ ರಾಯಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದ ಯುವಕರಿಗೆ ರಾಯಣ್ಣ ಆಕರ್ಷಣೀಯ. ಸಂಗೊಳ್ಳಿ ರಾಯಣ್ಣನ ಚರಿತ್ರೆಯನ್ನು ರಾಜ್ಯದ ಜನರಿಗೆ ತಿಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಅನೇಕ ಶಾಸಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.