ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚಲು ಗ್ಯಾರಂಟಿಗಳು ಕಾರಣ

| Published : Jul 27 2025, 12:00 AM IST

ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚಲು ಗ್ಯಾರಂಟಿಗಳು ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ವರದಿ ಪ್ರಕಾರ ಇಡೀ ದೇಶದಲ್ಲಿ ತಲಾ ಆದಾಯ ಹೆಚ್ಚಳದಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನದಲ್ಲಿದೆ. ಇದಕ್ಕೆ ನಮ್ಮ ಪಂಚ ಗ್ಯಾರಂಟಿಗಳೇ ಕಾರಣ. ಗ್ಯಾರಂಟಿಗಳಿಂದಾಗಿ ಜನರ ಬಳಿ ದುಡ್ಡು ಓಡಾಡುತ್ತಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ. ಇದರಿಂದ ಅಭಿವೃದ್ಧಿಯೂ ಆಗುತ್ತಿದೆ. ಆದರೆ, ಎಕನಾಮಿಕ್ಸಲ್ಲಿ ವೀಕ್‌ ಇರುವ ಬಿಜೆಪಿಯವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಶಿವಲಿಂಗೇಗೌಡರು ಜನಪ್ರಿಯ ಶಾಸಕರಾಗದಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಅವರು ಬಡವರ ಪರ, ಕ್ಷೇತ್ರದ ಪರ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನ ಅವರ ಪರವಾಗಿದ್ದಾರೆ. ಶಿವಲಿಂಗೇಗೌಡ್ರು ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಅವರೇ ಗೆದ್ದು ಬರುತ್ತಾರೆ ಅನ್ನೊ ನಂಬಿಕೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇತ್ತೀಚಿನ ವರದಿ ಪ್ರಕಾರ ಇಡೀ ದೇಶದಲ್ಲಿ ತಲಾ ಆದಾಯ ಹೆಚ್ಚಳದಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನದಲ್ಲಿದೆ. ಇದಕ್ಕೆ ನಮ್ಮ ಪಂಚ ಗ್ಯಾರಂಟಿಗಳೇ ಕಾರಣ. ಗ್ಯಾರಂಟಿಗಳಿಂದಾಗಿ ಜನರ ಬಳಿ ದುಡ್ಡು ಓಡಾಡುತ್ತಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ. ಇದರಿಂದ ಅಭಿವೃದ್ಧಿಯೂ ಆಗುತ್ತಿದೆ. ಆದರೆ, ಎಕನಾಮಿಕ್ಸಲ್ಲಿ ವೀಕ್‌ ಇರುವ ಬಿಜೆಪಿಯವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಪಟ್ಣಣದ ಜೇನುಕಲ್‌ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತ ಆಗಿಲ್ಲ. ಇಡೀ ದೇಶದಲ್ಲಿ ಕರ್ನಾಟಕ ತಲಾ ಆದಾಯ ಹೆಚ್ಚಳದಲ್ಲಿ ನಂಬರ್ ಒನ್ ಎಂಬುದನ್ನು ವಿಪಕ್ಷಗಳು ಗಮನಿಸಬೇಕು. ಸರ್ಕಾರ ದಿವಾಳಿ ಆಗಿದ್ದರೆ ಜನರ‌ ತಲಾ ಆದಾಯ ಹೇಗೆ ಹೆಚ್ಚಾಗುತ್ತಿತ್ತು. ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ಸರ್ಕಾರಕ್ಕೆ ಬರುವ ಆದಾಯವೂ ಹೆಚ್ಚಾಗಿದೆ. "ಬಿಜೆಪಿಯವರು ಎಕನಾಮಿಕ್ಸಲ್ಲಿ ವೀಕ್ ಹಾಗಾಗಿ ಅವರಿಗೆ ಇದೆಲ್ಲಾ ಅರ್ಥ ಆಗ್ತಿಲ್ಲ " ಎಂದು ಗ್ಯಾರೆಂಟಿ ಯೋಜನೆಯನ್ನು ಸಮರ್ಥಿಸಿಕೊಂಡರು.

ಕೆಎಂಶಿಗೆ ಮಂತ್ರಿ ಸ್ಥಾನ ನೀಡುವಂತೆ ಶ್ರೇಯಸ್ ಮನವಿ:ಮುಂದಿನ ಸಂಪುಟ ವಿಸ್ತರಣೆಯಲ್ಲಿ ಹಾಸನ ಜಿಲ್ಲೆಗೆ ಅವಕಾಶ ಮಾಡಿಕೊಡಬೇಕು ಎನ್ನುವ ಮೂಲಕ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ವೇದಿಕೆಯಲ್ಲಿದ್ದ ಸಿಎಂಗೆ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದರು. ಸಂಪುಟ ಪುನ‌ರ್ ರಚನೆ ಆದಾಗ ನೋಡೋಣ. ಈಗಲೇ ಹೇಳಲು ಬರಲ್ಲ. ಯಾರ್ಯಾರು ಆಕಾಂಕ್ಷಿಗಳಿದ್ದಾರೋ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಹೇಳಿದರು.

ಇಷ್ಟೊಂದು ಜನ ಸೇರಿರೋದು ಇತಿಹಾಸ:

ಶಿವಲಿಂಗೇಗೌಡರು ಜನಪ್ರಿಯ ಶಾಸಕರಾಗದಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಅವರು ಬಡವರ ಪರ, ಕ್ಷೇತ್ರದ ಪರ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನ ಅವರ ಪರವಾಗಿದ್ದಾರೆ. ಶಿವಲಿಂಗೇಗೌಡ್ರು ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಅವರೇ ಗೆದ್ದು ಬರುತ್ತಾರೆ ಅನ್ನೊ ನಂಬಿಕೆ ಇದೆ ಎಂದರು.

ಕ್ಷೇತ್ರದಲ್ಲಿ ಯಾರೂ ಮಾಡದ ಕೆಲಸ ಮಾಡಿದ್ದಾರೆ. ಎತ್ತಿನಹೊಳೆಯಿಂದ 10 ಕೆರೆ ತುಂಬಿಸುವ ಕೆಲಸಕ್ಕೆ ಕೈ ಹಾಕಿ‌ ಹಠಕ್ಕೆ ಬಿದ್ದು ಯೋಜನೆ ತಂದಿದ್ದಾರೆ. ಕುಡಿಯುವ ನೀರಿಗೆ 14 ಟಿಎಂಸಿ ಹಾಗೂ ಕೆರೆ ನೀರು ತುಂಬಿಸಲು ೧೦ ಟಿಎಂಸಿ ನೀರು ಬೇಕಿದ್ದು, ಇವತ್ತು 570 ಕೋಟಿ ರು. ಗಳ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡುತ್ತಿದ್ದು. ಇದು ನಮ್ಮ ಸರ್ಕಾರದ ಸಾಧನೆ ಎಂದರು.

ಹಾಸನ ಚುನಾವಣೆ ಕೆಎಂಶಿ ನೇತೃತ್ವದಲ್ಲಿ:

ಅರಸೀಕೆರೆ ತಾಲೂಕು ಮಲತಾಯಿ ಧೋರಣೆಗೆ ಒಳಗಾಗಿತ್ತು. ಅದನ್ನು ಶಿವಲಿಂಗೇಗೌಡರು ದೂರ ಮಾಡಿದ್ದಾರೆ. ಅವರ ನೇತೃತ್ವದಲ್ಲಿ‌ ಮುಂದಿನ‌ ಚುನಾವಣೆಯಲ್ಲಿ ಈ‌ ಜಿಲ್ಲೆಯ ಏಳಕ್ಕೆ ಏಳೂ ಕ್ಷೇತ್ರಗಳು‌ ಕಾಂಗ್ರೆಸ್ ಪಾಲಾಗಲಿವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭವಿಷ್ಯ ನುಡಿದರು.

ದೇವರು ಧರ್ಮ ಬಿಜೆಪಿಯವರ ಆಸ್ತಿ ಅಲ್ಲ. ಬಿಜೆಪಿ ಜೆಡಿಎಸ್ ಎರಡೇ ಅಲ್ಲ. ಇನ್ನೂ ನಾಲ್ಕು ಪಕ್ಷಗಳು ಸೇರಿಕೊಂಡರೂ 2028ಕ್ಕೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೇಮಾವತಿ ನೀರಿಗಾಗಿ ಕೈಮುಗಿದು ಬೇಡಿದ ಕೆಎಂಶಿ:

ಅರಸೀಕೆರೆಯಲ್ಲಿ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆಗೊಂಡಿದೆ. ವಸತಿ ಶಾಲೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಅರಸೀಕೆರೆ ನತದೃಷ್ಟ ತಾಲೂಕಾಗಿತ್ತು. ಕುಡಿಯುವ ನೀರು ಇರಲಿಲ್ಲ. ಕುಡಿಯುವ ನೀರು ಸೇರಿದಂತೆ ಎಲ್ಲಾ ಕೆಲಸ ಮಾಡಿಕೊಟ್ಟಿದ್ದು ಸಿದ್ರಾಮಣ್ಣ ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿಯನ್ನು ಶಿವಲಿಂಗೇಗೌಡರು ಶ್ಲಾಘಿಸಿದರು.

ನಾನು ಬೇರೆ ಪಕ್ಷದ ಶಾಸಕನಾಗಿದ್ದರೂ ಕೆಲಸ ಮಾಡಿಕೊಟ್ಟರು. ಇನ್ನೂ ಒಂದು ಕೊರಗಿದೆ. ಹೇಮಾವತಿ ನದಿ ಹಾಸನದಲ್ಲಿ ಇದ್ದರೂ ನೀರು ಬರಲಿಲ್ಲ, ಕೆರೆಗಳು ತುಂಬಲಿಲ್ಲ. ಎತ್ತಿನಹೊಳೆ ಯೋಜನೆಗೆ ನಮ್ಮ ಪಕ್ಷದವರೇ ವಿರೋಧ ಮಾಡಿದರು. ಅರಸೀಕೆರೆ ತಾಲೂಕಿಗೆ ಎತ್ತಿನಹೊಳೆ ಯೋಜನೆ ನೀರು ಬರಬೇಕು ಎಂದು ಡಿಕೆಶಿ ಅವರಲ್ಲಿ ಮನವಿ ಮಾಡಿದರು. ಈಗ ಡಿ.ಕೆ.ಶಿವಕುಮಾರ್ ನೀರಾವರಿ ಮಂತ್ರಿ ಆಗಿದ್ದಾರೆ. ಹತ್ತು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ.ಎತ್ತಿನಹೊಳೆ ಯೋಜನೆ ನೀರು ಎಲ್ಲೆಲ್ಲೋ ಹರಿದು ಹೋಗ್ತಿದೆ. ಆದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು‌. ನೀವು ಆಪತ್ಬಾಂಧವರಾಗಿ ನೀರು ಕೊಡಬೇಕು. ನಿಮ್ಮಿಬ್ಬರಿಗೂ ಕೈಮುಗಿದು ಬೇಡುತ್ತೇನೆ. ಇಬ್ಬರೂ ಸೇರಿ ಮಾಡಿಕೊಡಿ. ನಿಮ್ಮ ಋಣ ಮರೆಯೋದಿಲ್ಲ. ನಾವು ಬರಗಾಲ ಪ್ರದೇಶದವರು. ಹಿಂದೆ ನಮ್ಮ ತಾಲೂಕನ್ನು ಬೇರೆ ರೀತಿ ನೋಡಿದ್ದರು ಎಂದು ಕೆಎಂಶಿ ಹೇಳಿದರು. ಇದೇ ವೇಳೆ ತೆಂಗಿನ ಮರಗಳಿಗೆ ನಾಲ್ಕು ತರಹದ ರೋಗ ಬಂದಿದೆ. ಉತ್ತಮ ಬೆಲೆ ಇರುವ ವೇಳೆ ಮರಗಳು ಸರ್ವನಾಶ ಆಗುತ್ತಿವೆ. ಸರ್ಕಾರ ಸಮರೋಪಾದಿಯಲ್ಲಿ ಕಲ್ಪತರು ನಾಡನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ವಿರೋಧ ಪಕ್ಷದವರು ಸರ್ಕಾರ ಹೋಗುತ್ತೆ ಅಂತಾರೆ, ಅವರಿಗೆ ಕೆಲಸವಿಲ್ಲ. ಸರ್ಕಾರ ದಿವಾಳಿಯಾಗಿದೆ ಅಂತಾರೆ. ಈ ರಾಜ್ಯದಲ್ಲಿ ಬಡವರ ಬಗ್ಗೆ ಕಾಳಜಿ ಇಟ್ಟಿರುವುದು ಸಿದ್ರಾಮಣ್ಣನ ಸರ್ಕಾರ. ನಿಮಗೆ ತಾಕತ್ ಇದ್ದರೆ ಗ್ಯಾರಂಟಿ ರದ್ದು ಮಾಡಿ ಅಂಥ ಹೇಳಿ. ಜನ ಏನು ಮಾಡುತ್ತಾರೆ ನಿಮಗೆ ಗೊತ್ತಾಗುತ್ತದೆ . ಆರ್ಥಿಕ ಸ್ಥಿತಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ಬರೀ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್‌ ಅಹಮದ್‌, ಸಂಸದ ಶ್ರೇಯಸ್‌ ಪಟೇಲ್, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಪಂ ಸಿಇಒ ಪೂರ್ಣಿಮಾ, ಎಸ್ಪಿ ಮಹಮದ್‌ ಸುಜೀತಾ ಹಾಗೂ ಇತರರು ಇದ್ದರು.