ಸಾರಾಂಶ
ಗಜೇಂದ್ರಗಡ: ಸಮಾಜದಲ್ಲಿನ ಸರ್ವ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ನೆಮ್ಮದಿ ಹಾಗೂ ಅಭಿವೃದ್ಧಿ ತಂದಿದ್ದು, ಯೋಜನೆ ನಿಲ್ಲಿಸುವ ಯಾವುದೇ ಉದ್ಧೇಶ ಸರ್ಕಾರದ ಮುಂದಿಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಸರ್ವರು ಸಮಾನರು ಎನ್ನುವ ಆಶಯದಲ್ಲಿ ಬಲವಾಗಿ ನಂಬಿಕೆಯಿಟ್ಟಿರುವ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸರ್ವ ಸಮುದಾಯಗಳ ಜನರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳಲು ಯೋಜನೆಗಳು ಸಹಕಾರಿ ಎನ್ನುವುದು ಈಗಾಗಲೇ ಅಂಕಿ ಅಂಶಗಳಿಂದ ತಿಳಿದಿದೆ. ಸರ್ಕಾರ ಯೋಜನೆಗಳ ಬಗ್ಗೆ ತೃಪ್ತಿಯಿದ್ದು, ವಿಪಕ್ಷಗಳ ಟೀಕೆ ತಳ್ಳಿ ಹಾಕಿ ಯೋಜನೆ ಮುಂದುವರೆಸುತ್ತೇವೆ ಎಂದ ಅವರು, ಸರ್ಕಾರ ಜಾರಿಗೆ ತಂದಿರುವ ಯೋಜನೆ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಯೋಜನೆಗಳ ಲಾಭ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಎಂದರು.
ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶರಣಪ್ಪ ಬೆಟಗೇರಿ ಮಾತನಾಡಿ, ಸರ್ಕಾರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬರುವ ಅಧಿಕಾರಿಗಳು ಹಿಂದಿನ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಹಾಗೂ ಸದಸ್ಯರಿಂದ ಕೇಳಿ ಬಂದ ದೂರುಗಳಿಗೆ ಸಮರ್ಪಕ ಮಾಹಿತಿ ತರಬೇಕು.ಇಲ್ಲದಿದ್ದರೆ ಶಿಸ್ತು ಕ್ರಮಕ್ಕೆ ರಾಜ್ಯ ಕಮೀಟಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.ಗ್ಯಾರಂಟಿ ಸಮಿತಿ ಜಿಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಜಿಲ್ಲೆಯ ಗ್ಯಾರಂಟಿ ಸಮಿತಿಗಳಲ್ಲಿ ಗಜೇಂದ್ರಗಡ ತಾಲೂಕು ಗ್ಯಾರಂಟಿ ಸಮಿತಿಯವರು ಈಗಾಗಲೇ ೨ ಸಭೆ ಮಾಡಿದ್ದು ಹರ್ಷವನ್ನು ತಂದಿದೆ. ಅಧಿಕಾರಿಗಳು ಸಭೆಗೆ ಬರುವಾಗ ಚರ್ಚಿಸಿದ ಹಾಗೂ ದೂರುಗಳಿಗೆ ಕಂಡ ಪರಿಹಾರದ ಬಗ್ಗೆ ಸಮಂಜಸ ಉತ್ತರ ತಂದಿರಬೇಕು ಎಂದರು.
ಈ ವೇಳೆ ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶಾಸಕ ಜಿ.ಎಸ್. ಪಾಟೀಲ ಗುರುತಿನ ಚೀಟಿ ವಿತರಿಸಿದ ಬಳಿಕ ಹೆಸ್ಕಾಂನ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಭಿತ್ತಿ ಪತ್ರ ಅನಾವರಣಗೊಳಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡು ಯೋಜನೆ ಲಾಭ ಜನತೆಗೆ ತಲುಪಿಸಿ ಎಂದರು.ಗದಗ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಇಒ ಮಂಜುಳಾ ಹಕಾರಿ, ಸದಸ್ಯರಾದ ಶರಣು ಪೂಜಾರ, ಇಮಾಮಸಾಬ್ ಬಾಗವಾನ, ಬಸವರಾಜ ಬಿದರೂರ, ಯಮನೂರಪ್ಪ ತಳವಾರ, ಭೀಮಪ್ಪ ಮೇಟಿ, ಅಲ್ಲಾಸಾಬ್ ಮುಜಾವರ, ಶರಣಯ್ಯ ಕಾರಡಗಿಮಠ, ಶರಣಪ್ಪ ಸಜ್ಜನ, ನಿಂಗಪ್ಪ ಹಂಡಿ, ಪ್ರೇಮಾ ಇಟಗಿ ಸೇರಿ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.
ಅಧಿಕಾರಿಗಳ ಕರ್ತವ್ಯಕ್ಕೆ ಗರಂಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜಿ.ಎಸ್. ಪಾಟೀಲ ಆಹಾರ ಇಲಾಖೆ ಹಾಗೂ ಸಿಡಿಪಿಒ ಕರ್ತವ್ಯದ ಬಗ್ಗೆ ಗರಂ ಆದ ಘಟನೆ ನಡೆಯಿತು. ಸಮಿತಿ ಸದಸ್ಯರು ತಾಲೂಕಿನಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಹಾಗೂ ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಇದನ್ನು ಸರಿಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರೆ ಇನ್ನೂ ಕೆಲ ಸದಸ್ಯರು ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದರು.