ಕನ್ನಡಪ್ರಭ ವಾರ್ತೆ ವಿಜಯಪುರ

ಬಡವರು ಮತ್ತು ಹಿಂದುಳಿದ ವರ್ಗದ ಜನರ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಫಲಪ್ರದವಾಗಿದ್ದು, ಎಲ್ಲ ವರ್ಗದವರಿಗೆ ಆರ್ಥಿಕ ಸಬಲತೆ ತಂದುಕೊಟ್ಟಿವೆ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ 10 ಕೆಜಿ ಉಚಿತ ಅಕ್ಕಿಯಿಂದ ಬಡವರಿಗೆ, ಹಿಂದುಳಿದವರ ಜೀವನ ನಿರ್ವಹಣೆಯೊಂದಿಗೆ ವಿವಿಧ ಗ್ಯಾರಂಟಿ ಯೋಜನೆ ಹಣದಿಂದ ನೆಮ್ಮದಿ ಬದುಕು ಕಂಡುಕೊಂಡು ಸಂತೋಷದ ಜೀವನ ನಡೆಸುತ್ತಿರುವುದು ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಅನುಷ್ಟಾನ ತಂದ ಪಂಚ ಗ್ಯಾರಂಟಿ ಯೋಜನೆಗಳು 98 ಪ್ರತಿಶತ ಕಾರ್ಯರೂಪಕ್ಕೆ ಬಂದಿದ್ದು, ಈ ಬಗ್ಗೆ ಮನೆ ಮನೆಗಳಲ್ಲಿ ಹಾಗೂ ಪ್ರತಿಯೊಬ್ಬರಿಗೂ ಈ ಯೋಜನೆಗಳ ಮಾಹಿತಿ ತಲುಪುವಂತಾಗಬೇಕು. ನಾವು ಎಂದೆಂದೂ ರೈತರು, ಯುವಕರು ಹಾಗೂ ಮಹಿಳೆಯರ ಪರವಾಗಿದ್ದೇವೆ. ಇದರಿಂದ ಅಭಿವೃದ್ಧಿ ಪರ್ವ ಕಂಡಿದೆ. ಪಂಚ ಗ್ಯಾರಂಟಿಗಳಿಂದ ಉಳಿತಾಯವಾಗುತ್ತಿರುವ ಹಣ ವಿವಿಧ ಬಗೆಯ ವಸ್ತುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ತೆರಿಗೆ ಕೂಡ ವೃದ್ಧಿಯಾಗಿ ಆದಾಯವೂ ಹೆಚ್ಚಾಗಿದೆ. ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.

ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ, ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಪಾಟೀಲ (ಬ್ಯಾಡಗಿ) ಮಾತನಾಡಿದರು. ಫಲಾನುಭವಿಗಳಾದ ಪರ್ನಾಜ ಮುತುವಲ್ಲಿ, ಸರುಬಾಯಿ ಹಿರೇಮಠ, ಭುವನೇಶ್ವರಿ, ಶೃತಿ ಝಂಡೆ ಈ ಯೋಜನೆಗಳಿಂದಾಗಿರುವ ಅನುಕೂಲಗಳ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಜನತೆಗೆ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಲು ಅನುಕೂಲ ಒದಗಿಸಿವೆ ಎಂದರು.


ಕರ್ನಾಟಕ ಜಾಗೃತಿ ಸಂಚಾಲಕ ಡಾ.ವಾಸು ಉಪನ್ಯಾಸ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸ್ವಾಗತಿಸಿದರು. ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ನಿರೂಪಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ವಂದಿಸಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಆಧ್ಯಕ್ಷ ಬಿ.ಎಸ್.ಕವಲಗಿ, ಶಾಸಕರಾದ ಅಶೋಕ ಮನಗೂಳಿ, ಸುನೀಲಗೌಡ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಬ್ಬೀರಅಹ್ಮದ ಜಾಗೀರದಾರ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.