ಸಾರಾಂಶ
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ, ಸದಸ್ಯರ ಪದಗ್ರಹಣ । 74,460 ಮಹಿಳೆಯರಿಗೆ ಲಾಭ
ಕನ್ನಡಪ್ರಭ ವಾರ್ತೆ ಕಡೂರುನಮ್ಮ ನಾಯಕರಾದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಎಲ್ಲ ವರ್ಗದವರಿಗೂ ಸಮಾನವಾಗಿ ಸವಲತ್ತು ನೀಡುವ ಮೂಲಕ ಕಡೂರು ತಾಲೂಕಿನಲ್ಲಿ ಗ್ಯಾರಂಟಿಗಳು ಶೇ100 ರಷ್ಟು ಜನರನ್ನು ತಲುಪಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕಡೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಆಸಂದಿ ಕಲ್ಲೇಶ್ ಮತ್ತು ಘಟಕದ ಸದಸ್ಯರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ನಮ್ಮ ಕಡೂರು ತಾಲೂಕಿನ 74,460 ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಸರ್ಕಾರದ ಸವಲತ್ತು ಎಲ್ಲ ವರ್ಗಗಳಿಗೆ ತಲುಪಲು ಕ್ಷೇತ್ರದಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮ ಮಾಡಿದ್ದು ಗೃಹಜ್ಯೋತಿಯಲ್ಲಿ 26 ಕೋಟಿ ರು. ಕಡೂರಿಗೆ ಸಿಗುತ್ತಿದೆ ಎಂದರು.
ಶಕ್ತಿ ಯೋಜನೆಯಲ್ಲಿ ಕಾರ್ಯಕ್ರಮದಲ್ಲಿ 2023ರ ಜೂನ್ ನಿಂದ 2024ರ ಡಿಸೆಂಬರ್ ತನಕ 40.50 ಕೋಟಿ ರು. ವ್ಯಯವಾಗಿದೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ರವರು ಸವಲತ್ತುಗಳು ಸರಿಯಾಗಿ ತಲುಪುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿ ಶುಭ ಹಾರೈಸಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ,ಶಿವಾನಂದ ಸ್ವಾಮಿ ಮಾತನಾಡಿ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಕೊಟ್ಟ ಮಾತಿಗೆ ತಪ್ಪದಂತೆ ಶಕ್ತಿ ಯೋಜನೆ ಸೇರಿ 5 ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಇದರಲ್ಲಿ ಯಾವುದೇ ಭೇದಭಾವ ಮಾಡಿಲ್ಲ. ಕಡೂರು ತಾಲೂಕಿನಲ್ಲಿ 80 ಸಾವಿರ ಮನೆಗಳಿಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಸೇರಿ ಅನುಷ್ಠಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ಕಡೂರು ತಾಲೂಕಿನ 67,000 ಜನರಿಗೆ ಅನ್ನ ಭಾಗ್ಯ ದೊರೆಯುತ್ತದೆ. 5 ಗ್ಯಾರಂಟಿಗಳಿಗೆ ಜಿಲ್ಲೆಯಲ್ಲಿ 85 ಕೋಟಿ ರು. ವೆಚ್ಚವಾಗುತ್ತಿದೆ ಎಂದು ಮಾಹಿತಿ ನೀಡಿದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಗ್ಯಾರಂಟಿಯಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ನಮ್ಮ ಕಡೂರು ಹಾಗು ತರೀಕೆರೆ ತಾಲೂಕುಗಳು ಬರಗಾಲದ ತಾಲೂಕುಗಳಾಗಿವೆ. ಕಾರ್ಮಿಕರು ಹೆಚ್ಚಾಗಿ ಕೆಲಸಕ್ಕಾಗಿ ಬೇರೆಡೆಗೆ ಗುಳೆ ಹೋಗುತ್ತಿದ್ದರು.ಗ್ಯಾರಂಟಿಗಳಿಂದ ಹೆಚ್ಚು ಬಡವರಿಗೆ ಅನುಕೂಲವಾಗಲಿದೆ. ನಮ್ಮ ಶಾಸಕರಾದ ಆನಂದ್ ರವರು ಕಡೂರು ಪಟ್ಟಣ ಬೆಳೆಯುತ್ತಿರುವ ಕಾರಣ ಪ್ರವಾಸಿ ಮಂದಿರದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಜನ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಬೇಕು ಎಂದರು.
ತಾಲೂಕು ಕಚೇರಿ ಸ್ಥಳಾಂತರಿಸಿದಲ್ಲಿ ಇದು ನಿಯಂತ್ರಣವಾಗಲಿದೆ. ಇದನ್ನು ಹಿಂದಿನ ಶಾಸಕರಾದ ಬೆಳ್ಳಿ ಪ್ರಕಾಶ್ ಅವರಿಗೂ ಮನವರಿಕೆ ಮಾಡಿದ್ದೆ. ಸದ್ಯಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಬೇಕು. ಅಲ್ಲದೆ 2016ರಲ್ಲಿ ಶಾಸಕರಾಗಿದ್ದ ವೈ.ಎಸ್.ವಿ.ದತ್ತರವರ ಅವಧಿಯಲ್ಲಿ ರೈತರಿಗೆ ಸಾಗುವಳಿ ಪತ್ರ ನೀಡಲಾಗಿತ್ತು.ಇದೀಗ ಅವರಿಗೆ ಮೂಲಪತ್ರ ನೀಡುವಂತೆ ನೋಟಿಸ್ ನೀಡಲಾಗಿದ್ದು, ಮೂಲ ಪತ್ರ ತಾಲೂಕು ಕಚೇರಿಯಲ್ಲಿ ಇರುತ್ತದೆ .ಆತಂಕದಲ್ಲಿರುವ ರೈತರ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಕಾಡ ಸಮಿತಿ ಅಧ್ಯಕ್ಷ ಡಾ. ಅಂಶುಮಂತ್, ತಾಪಂ ಇಒ ಸಿ.ಆರ್.ಪ್ರವೀಣ್, ದೇವರಾಜ್, ಜಿ ಅಶೋಕ್, ಮಂಜುನಾಥ ಸ್ವಾಮಿ, ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಹೆಚ್.ಚಂದ್ರಪ್ಪ, ಡಿ.ಎಸ್.ಉಮೇಶ್, ಪಂಚನಹಳ್ಳಿ ಸತೀಶ್, ಜಿ. ರಾಜಪ್ಪ, ಈರಳ್ಳಿ ರಮೇಶ್, ಸಮಿತಿಯ 14 ಜನ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.