ಬಡ ಜನರ ಬದುಕು ಹಸನುಗೊಳಿಸಿದ ಗ್ಯಾರಂಟಿಗಳು

| Published : Aug 20 2024, 12:56 AM IST

ಸಾರಾಂಶ

ಐದು ಪ್ರಮುಖ ಗ್ಯಾರಂಟಿಗಳ ಅನುಷ್ಠಾನದ ಮೂಲಕ ಬಡ ಜನತೆಯ ಬದುಕನ್ನು ಹಸನುಗೊಳಿಸಲು ಸರ್ಕಾರ ಕಳೆದ 15ತಿಂಗಳಿನಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದೆ. ತಾಲೂಕಿನಲ್ಲಿ ಈ ಯೋಜನೆಯ ಗುಣಾತ್ಮಕ ಅನುಷ್ಠಾನಕ್ಕಾಗಿ ಸಮಿತಿ ಜಾರಿಗೆ ತಂದಿದ್ದು, ಗ್ಯಾರಂಟಿ ಯೋಜನೆಗಳು ಜನರ ಅಭ್ಯುದಯಕ್ಕೆ ಪ್ರೇರಣಾ ಶಕ್ತಿಯಾಗಿವೆ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಐದು ಪ್ರಮುಖ ಗ್ಯಾರಂಟಿಗಳ ಅನುಷ್ಠಾನದ ಮೂಲಕ ಬಡ ಜನತೆಯ ಬದುಕನ್ನು ಹಸನುಗೊಳಿಸಲು ಸರ್ಕಾರ ಕಳೆದ 15ತಿಂಗಳಿನಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದೆ. ತಾಲೂಕಿನಲ್ಲಿ ಈ ಯೋಜನೆಯ ಗುಣಾತ್ಮಕ ಅನುಷ್ಠಾನಕ್ಕಾಗಿ ಸಮಿತಿ ಜಾರಿಗೆ ತಂದಿದ್ದು, ಗ್ಯಾರಂಟಿ ಯೋಜನೆಗಳು ಜನರ ಅಭ್ಯುದಯಕ್ಕೆ ಪ್ರೇರಣಾ ಶಕ್ತಿಯಾಗಿವೆ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.

ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಶಶಿಧರ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸಮಿತಿ ರಚಿಸಿದ್ದು, ಪ್ರತಿ ತಿಂಗಳು ಎರಡು ಬಾರಿ ಸಮಿತಿ ಸಭೆ ನಡೆಸಿ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಬೆಸ್ಕಾಂ ಇಲಾಖೆ ಬಗ್ಗೆ ಮಾಹಿತಿ ನೀಡಿದ ಎಇಇ ಜಿ.ಶಿವಪ್ರಸಾದ್, ಚಳ್ಳಕೆರೆ ವಿಭಾಗದಲ್ಲಿ 52597 ಫಲಾನುಭವಿಗಳಿಗೆ ಸಂಪರ್ಕ ಕಲ್ಪಿಸಬೇಕಿದೆ. ಇದರಲ್ಲಿ 451899 ಜನರಿಗೆ ಈ ಯೋಜನೆ ದೊರಕಿದೆ. ನಗರ ಪ್ರದೇಶದಲ್ಲಿ 200 ಯೂನಿಟ್ ವಿದ್ಯುತ್ ಬಳಸುವವರ ಮಾಹಿತಿಯನ್ನು ಸಂಗ್ರಹಿಸಿ ನೀಡಲಾಗುವುದು ಎಂದರು.

ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಪ್ರಭು ಮಾಹಿತಿ ನೀಡಿ, ಕಳೆದ ಜೂನ್‌ನಿಂದ ಆಗಸ್ಟ್ 13ರವರೆಗೂ 4.78 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಒಟ್ಟು 19.27 ಕೋಟಿ ಆದಾಯ ಲಭಿಸಿದೆ ಎಂದರು. ಮುಂದಿನ ದಿನಗಳಲ್ಲಿ ಚಳ್ಳಕೆರೆ ಘಟಕದಿಂದ ಹೊಸ ಮಾರ್ಗಗಳಲ್ಲಿ 8 ಬಸ್‌ಗಳನ್ನು ಸಮರ್ಪಿಸಲಾಗುವುದು ಎಂದರು.

ಯುವ ನಿಧಿ ಅಧಿಕಾರಿ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಒಟ್ಟು ೧೮೩೫ ಫಲಾನುಭವಿಗಳು ನೊಂದಾವಣೆ ಮಾಡಿದ್ದು ೫೫ ಲಕ್ಷ ಹಣವನ್ನು ವಿತರಣೆ ಮಾಡಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಹರಿಪ್ರಸಾದ್ ಮಾಹಿತಿ ನೀಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 54019 ಫಲಾನುಭವಿಗಳು ನೊಂದಾವಣೆಯಾಗಿದ್ದು, 53590 ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿದೆ ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಶ್ರೀನಿವಾಸ್ ಮಾಹಿತಿ ನೀಡಿ, ನೂತನ ಪಡಿತರಚೀಟಿ ನೀಡಲು ಅರ್ಜಿ ಆಹ್ವಾನಿಸಿದ್ದು ಎರಡು ಸಾವಿರ ಅರ್ಜಿಗಳು ಆನ್‌ಲೈನ್ ಮೂಲಕ ಬಂದಿವೆ ಎಂದರು.

ಕೃಷಿ ಅಧಿಕಾರಿ ಜೆ. ಅಶೋಕ್ ಮಾಹಿತಿ ನೀಡಿ, ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ಈಗಷ್ಟೇ ಬಿತ್ತನೆ ಕಾರ್ಯ ಆರಂಭವಾಗಿದೆ. ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ರಾಗಿ ಮುಂತಾದ ಬೆಳೆಗಳ ಬಿತ್ತನೆ ಕಾರ್ಯ ಆರಂಭವಾಗಿದೆ. ತಾಲೂಕಿನಾದ್ಯಂತ ಒಟ್ಟು 13000 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ದಾಸ್ತಾನು ಮಾಡಿದ್ದು, ಆ ಪೈಕಿ 11200 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ಈಗಾಗಲೇ ವಿತರಣೆ ಮಾಡಿದೆ ಎಂದರು.

ಗ್ರಾಮೀಣಾಭಿವೃದ್ದಿ ಮತ್ತು ಕುಡಿಯುವ ನೀರು ವಿಭಾಗದ ಅಧಿಕಾರಿ ಮಾಹಿತಿ ನೀಡಿ, ತಾಲೂಕಿನಾದ್ಯಂತ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದೆ. ಯಾವ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದರು.

ಈ ವೇಳೆ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಗದ್ದಿಗೆ ತಿಪ್ಪೇಸ್ವಾಮಿ, ಎಚ್. ಆಂಜನೇಯ, ಕವಿತಾ, ಪುರುಷೋತ್ತಮನಾಯ್ಕ, ಎಸ್. ಮುಜೀಬುಲ್ಲಾ, ಹನುಮಂತರೆಡ್ಡಿ, ಅನಿಲ್‌ಕುಮಾರ್, ನಾಗೇಶ್, ಉಮೇಶ್, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಆರ್. ಬಸಪ್ಪ, ಜನಾರ್ಥನ ಇವರನ್ನು ಸನ್ಮಾನಿಸಿದರು.