ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದ ಕಳ್ಳೀಪುರ-ಹೊನ್ನೇಗೌಡನಹಳ್ಳಿ ರಸ್ತೆ ಬಳಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಪತ್ತೆಗೆ ಹೋಗಿದ್ದ ಗಾರ್ಡ್‌ ಹಾಗೂ ಕ್ಯಾಂಪ್‌ ವಾಚರ್‌ ಗಾಯಗೊಂಡ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದ ಕಳ್ಳೀಪುರ-ಹೊನ್ನೇಗೌಡನಹಳ್ಳಿ ರಸ್ತೆ ಬಳಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಪತ್ತೆಗೆ ಹೋಗಿದ್ದ ಗಾರ್ಡ್‌ ಹಾಗೂ ಕ್ಯಾಂಪ್‌ ವಾಚರ್‌ ಗಾಯಗೊಂಡ ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ ಕಳ್ಳೀಪುರ ರಸ್ತೆ ಬಳಿ ಹುಲಿ ರೈತರು ಹಾಗೂ ದನಗಾಹಿಗಳಿಗೆ ಕಾಣಿಸಿಕೊಂಡಿದೆ. ಆಗ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ ಬಳಿಕ ಗಾರ್ಡ್‌ ಮಂಜು ಹಾಗೂ ಕ್ಯಾಂಪ್‌ ವಾಚರ್‌ ಶಿವಕುಮಾರ್‌ ಹುಲಿ ಕಂಡ ಸ್ಥಳದತ್ತ ರೈತರೊಂದಿಗೆ ಹೋದಾಗ ಹುಲಿ ಅವರತ್ತ ಹಾರಿದೆ. ನೆಲಕ್ಕೆ ಬಿದ್ದ ಗಾರ್ಡ್‌ ಮಂಜುಗೆ ಒಳ ನೋವಾದರೆ, ಕ್ಯಾಂಪ್‌ ವಾಚರ್‌ ಶಿವಕುಮಾರ್‌ ಕಾಲಿಗೆ ಸ್ವಲ್ಪ ಗಾಯವಾಗಿದೆ.

ಗಾಯಗೊಂಡ ಕ್ಯಾಂಪ್‌ ವಾಚರ್‌ ಶಿವಕುಮಾರ್‌ ಅವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಬಳಿಕ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ.

ರೈತರ ಆಕ್ರೋಶ:

ಕಳ್ಳೀಪುರ ರಸ್ತೆ ಬಳಿ ಹಾಡಹಗಲೇ ಹುಲಿ ಕಾಣಿಸಿಕೊಂಡಿರುವುದು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹುಲಿ ಪತ್ತೆಗೆ ಬಂದ ಸಿಬ್ಬಂದಿಗೆ ಯಾವುದೇ ರಕ್ಷಣಾ ಸಾಮಗ್ರಿ ಇಲ್ಲದೆ ಬಂದಿದ್ದಾರೆ ಎಂದು ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಹುಲಿ ಸೆರೆಗೆ ಆಗ್ರಹ:

ಕಳ್ಳೀಪುರ ರಸ್ತೆ ಬಳಿ ಹುಲಿ ಸೆರೆ ಹಿಡಿಯಬೇಕು ಎಂದು ರೈತರ ಆಗ್ರಹಕ್ಕೆ ಮಣಿದ ಅರಣ್ಯ ಇಲಾಖೆ ದ್ರೋಣ್‌ ಕ್ಯಾಮೆರಾ ಮೂಲಕ ಹುಲಿ ಪತ್ತೆಗೆ ಮುಂದಾಗಿದ್ದಾರೆ ಆ ವೇಳೆಗೆ ಮಳೆ ಬಂದ ಕಾರಣ ಕೆಲಸ ಸ್ಥಗಿತಗೊಂಡಿದೆ.

ಸಾಕಾನೆ ಕರೆಸಲು ಅರಣ್ಯ ಇಲಾಖೆ ಮುಂದಾಗಿದೆ.ಮಳೆ ನಿಲ್ಲದ ಕಾರಣ ಭಾನುವಾರ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.