ಸಾರಾಂಶ
ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಪಟ್ಟಣದ ಮಡಹಳ್ಳಿ ವೃತ್ತದಲ್ಲಿನ ಹೆದ್ದಾರಿಯ ಡೆಕ್ ಕುಸಿದು ತಿಂಗಳೇ ಉರುಳುತ್ತಿದ್ದರೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಮೊಳಗಿಸಿದರು.
ಕನ್ನಡಪ್ರಭ ವಾರ್ತೆ ಗು೦ಡ್ಲಪೇಟೆ
ಪಟ್ಟಣದ ಮಡಹಳ್ಳಿ ಸರ್ಕಲ್ ಬಳಿಯ ಡೆಕ್ ಕುಸಿತಗೊಂಡ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಬೆನ್ನಲ್ಲೆ ಕಾವಲು ಪಡೆ ಕಾರ್ಯಕರ್ತರು ಡೆಕ್ ಕುಸಿತ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಮಂಗಳವಾರ ಆಕ್ರೋಶ ಹೊರ ಹಾಕಿದ್ದಾರೆ.ಜೂ.೧೧ ರ ಮಂಗಳವಾರದ ಕನ್ನಡಪ್ರಭ ಪತ್ರಿಕೆಯಲ್ಲಿ ಮಡಹಳ್ಳಿ ಸರ್ಕಲ್ ನ ಜಲ ಸಮಸ್ಯೆ ಜೊತೆಗೆ ಡೆಕ್ ಸಮಸ್ಯೆ ಎದುರಾಯ್ತು.. ಎಂದು ವರದಿ ಪ್ರಕಟಿಸಿತ್ತು.
ಪ್ರತಿಭಟನೆ: ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಪಟ್ಟಣದ ಮಡಹಳ್ಳಿ ವೃತ್ತದಲ್ಲಿನ ಹೆದ್ದಾರಿಯ ಡೆಕ್ ಕುಸಿದು ತಿಂಗಳೇ ಉರುಳುತ್ತಿದ್ದರೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಮೊಳಗಿಸಿದರು.ಕಾವಲು ಪಡೆಯ ಅಬ್ದುಲ್ ಮಾಲೀಕ್ ಮಾತನಾಡಿ ಡೆಕ್ ಕುಸಿತಗೊಂಡಿದ್ದರೂ ಅಧಿಕಾರಿಗಳು ಡೆಕ್ ದುರಸ್ತಿಪಡಿಸಲು ಕ್ರಮ ವಹಿಸಿಲ್ಲ. ಮಡಹಳ್ಳಿ ರಸ್ತೆಗೆ ಹೋಗುವ ಸರ್ಕಲ್‌ನ ಮಧ್ಯ ಭಾಗದಲ್ಲಿ ಕುಸಿತಗೊಂಡಿದೆ ಎಂದು ದೂರಿದರು.
ಪಟ್ಟಣದ ನಾಗರೀಕರು ಹಾಗೂ ಗ್ರಾಮಾಂತರ ಪ್ರದೇಶದ ಜನರು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಕೂಡಲೇ ದುರಸ್ತಿಪಡಿಸದಿದ್ದಲ್ಲಿ ಕಾವಲು ಪಡೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಳಿಕ ಪಟ್ಟಣದ ಲೋಕೋಪಯೋಗಿ ಇಲಾಖೆಗೆ ತೆರಳಿ ಮನವಿ ಸಲ್ಲಿಸಿ, ಬೇಗ ದುರಸ್ತಿಗೆ ಮುಂದಾಗಿ, ಅನಾಹುತ ತಪ್ಪಿಸಬೇಕು, ಶಾಸಕರು ಕೂಡ ಅಧಿಕಾರಿಗಳಿಗೆ ದಬಾಯಿಸಿ ಹೇಳಬೇಕು ಎಂದು ಅಬ್ದುಲ್ ಮಾಲೀಕ್ ಹೇಳಿದ್ದಾರೆ.
ಕಾವಲು ಪಡೆಯ ಎಸ್.ಮುಬಾರಕ್, ಸಾದಿಕ್ ಪಾಷ, ಶಕೀಲ್,ಹೆಚ್. ರಾಜು, ಮಿಮಿಕ್ರಿ ರಾಜು, ರಾಮೇಗೌಡ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.